ತುರ್ಕಿ
ಪಶ್ಚಿಮ ಏಷ್ಯ ವಲಯದ ಒಂದು ದೇಶ. ಇದರ ಒಂದು ಭಾಗ ಆಗ್ನೆಯ ಯೂರೋಪಿನಲ್ಲೂ ಇನ್ನೊಂದು ಭಾಗ ನೈಋತ್ಯ ಏಷ್ಯದಲ್ಲೂ ಇವೆ. ಈ ದೇಶ ಎರಡು ಖಂಡಗಳಲ್ಲಿ ಇರುವ ಅಂಶ ಇದರ ಇತಿಹಾಸ, ಸಂಸ್ಕøತಿ ಮತ್ತು ರಾಜಕಾರಣದ ಮೇಲೆ ವಿಶೇಷ ಪ್ರಭಾವ ಬೀರಿದೆ. ಇದು ಪೂರ್ವ ಪಶ್ಚಿಮಗಳ ನಡುವಣ ಸೇತುವೆಯೆಂದು ಹೇಳುವುದುಂಟು. ಇದರ ಉತ್ತರದಲ್ಲಿ ಕಪ್ಪುಸಮುದ್ರ, ಈಶಾನ್ಯ ಮತ್ತು ಪೂರ್ವದಲ್ಲಿ ಜಾರ್ಜಿಯ, ಆರ್ಮೇನಿಯ ಮತ್ತು  ಇರಾನ್, ಆಗ್ನೇಯದಲ್ಲಿ ಇರಾಕ್, ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರ ಹಾಗೂ ಸಿರಿಯ, ಪಶ್ಚಿಮದಲ್ಲಿ ಇಜೀಯನ್ ಸಮುದ್ರ ; ವಾಯವ್ಯದಲ್ಲಿ ಗ್ರೀಸ್ ಹಾಗೂ ಬಲ್ಗೇರಿಯ ಇವೆ. ವಿಸ್ತೀರ್ಣ 7,74,815 ಚ.ಕಿ.ಮೀ ಉತ್ತರ ದಕ್ಷಿಣವಾಗಿ 748 ಕಿ.ಮೀ. ಪೂರ್ವ ಪಶ್ಚಿಮವಾಗಿ 1633 ಕಿ.ಮೀ ಇದ್ದು 3,558 ಕಿ.ಮೀ ಸಮುದ್ರ ತೀರ ಹೊಂದಿದೆ. ಇದರಲ್ಲಿ ಯೂರೋಪಿಯನ್ ತುರ್ಕಿಯ (ಪೂರ್ವ ತ್ರೇಸ್) ಭಾಗ 9,158 ಚ.ಮೈ. (23721 ಚ.ಕಿಮೀ.) ಮತ್ತು ಏಷ್ಯನ್ ತುರ್ಕಿಯ (ಅನಟೋಲಿಯ) ಭಾಗ (7,56,855 ಚ.ಕಿಮೀ.) ಇವೆ. ಇಜೀಯನ್ ಸಮುದ್ರದಲ್ಲಿರುವ ಇಮ್ರಾಜ್ ಮತ್ತು ಬೋಜ್‍ಜಾದಾ ದ್ವೀಪಗಳೂ ತುರ್ಕಿಗೆ ಸೇರಿವೆ. ತುರ್ಕಿಯ ವಿಸ್ತೀರ್ಣದಲ್ಲಿ ಒಳನಾಡಿನ (8,387 ಚ.ಕಿಮೀ) ಜಲ ಹಾಗೂ ಜವುಗು ಭಾಗವೂ ಸೇರಿವೆ. ಜನಸಂಖ್ಯೆ 6,77,48000  (2000).  ರಾಜಧಾನಿ ಆಂಕರ. ಜನಸಾಂದ್ರತೆ ಚ.ಕಿ.ಮೀಗೆ 87. ಸೇ 64ರಷ್ಟು ಮಂದಿ ನಗರ ಪಟ್ಟಣ ವಾಸಿಗಳೂ ಸೇ. 36 ರಷ್ಟು ಮಂದಿ ಗ್ರಾಮವಾಸಿಗಳೂ ಇದ್ದಾರೆ (2000).

ಬಾಸ್ಟೊರಸ್ ಜಲಸಂಧಿ, ಮಾರ್ಮರ ಸಮುದ್ರ, ಡಾರ್ಡನಲ್ಸ್ ಜಲಸಂಧಿ-ಇವು ಯುರೋಪಿಯನ್ ತುರ್ಕಿಯನ್ನು ಏಷ್ಯನ್ ಭಾಗವಾದ ಅನಟೋಲಿಯದಿಂದ ಪ್ರತ್ಯೇಕಿಸುತ್ತವೆ. ಕಪ್ಪು ಸಮುದ್ರಕ್ಕೂ ಮೆಡಿಟರೇನಿಯನ್‍ಗೂ ನಡುವೆ ಸಮುದ್ರ ಮಾರ್ಗ ಇರುವುದು ಇವುಗಳ ಮೂಲಕ.								      (ವಿ.ಜಿ.ಕೆ.)

ಭೂವಿಜ್ಞಾನ : ದೇಶದ ವಿಸ್ತಾರ ಕಿರಿದಾಗಿದ್ದರೂ ಭೂವೈಜ್ಞಾನಿಕ ದೃಷ್ಟಿಯಿಂದ ಇದರಲ್ಲಿ ಸಾಕಷ್ಟು ವೈವಿಧ್ಯ ಉಂಟು. ಪೂರ್ವ ಕೇಂಬ್ರಿಯನ್ ಯುಗದ ಶಿಲೆಗಳಿಂದ ತೊಡಗಿ ಈಚಿನ ಶಿಲಾನಿಕ್ಷೇಪಗಳ ವರೆಗೆ ಎಲ್ಲವನ್ನೂ ಇಲ್ಲಿ ಗುರುತಿಸಲು ಸಾಧ್ಯವಾಗಿದೆ. ಅಲ್ಲದೆ ಭೂ ಇತಿಹಾಸದ ವಿವಿಧ ಹಂತಗಳಲ್ಲಿ ನಡೆದ ಪರ್ವತಜನ್ಯ ಚಟುವಟಿಕೆಗಳನ್ನೂ ಈ ಶಿಲೆಗಳಲ್ಲಿ ಕಾಣಬಹುದು. ಹಲವಾರು ಅಗ್ನಿ ಶಿಲಾಂತಸ್ಸರಣಗಳಿಂದ ಛೇದಿತವಾಗಿರುವ ಪದರುಶಿಲೆಗಳನ್ನು ದೇಶದ ಅತ್ಯಂತ ಹಳೆಯ ಶಿಲಾವರ್ಗಗಳೆಂದು ಗುರುತಿಸಲಾಗಿದೆ. ಇವು ಪೂರ್ವ ಕೇಂಬ್ರಿಯನ್ ಕಲ್ಪದವು (ಸುಮಾರು 600 ದಶಲಕ್ಷ ವರ್ಷ ಪ್ರಾಚೀನ). ಇವುಗಳ ಮೇಲೆ ಅಲ್ಲಲ್ಲಿ ಆರ್ಡೊವೀಷಿಯನ್ ಹಾಗೂ ಸೈಲೂರಿಯನ್ ಕಲ್ಪಗಳ (ಸುಮಾರು 500 ದ.ಲ.ವ. ಪ್ರಾಚೀನದಿಂದ 400 ದ.ಲ.ವ. ಪ್ರಾಚೀನದ ತನಕ) ಸಣ್ಣಪುಟ್ಟ ನಿಕ್ಷೇಪಗಳಿವೆ. ಆದರೆ ದೇಶದ ಪಶ್ಚಿಮ ಹಾಗೂ ಉತ್ತರ ಭಾಗಗಳಲ್ಲಿ ವಿಸ್ತಾರವಾಗಿ ಹರಡಿರುವ ಡೆಮೋನಿಯನ್ ಶಿಲಾಸ್ತರಶ್ರೇಣಿಗಳನ್ನು (ಸುಮಾರು 400 ದ.ಲ.ವ. ಪ್ರಾಚೀನದಿಂದ 350 ದ.ಲ.ವ. ಪ್ರಾಚೀನದ ತನಕ) ಕಾಣಬಹುದು. ಕಾರ್ಬಾನಿಫೆರಸ್ ಶಿಲಾನಿಕ್ಷೇಪಗಳು (ಸುಮಾರು 350 ದ. ಲ. ವ. ಪ್ರಾಚೀನದಿಂದ 280 ದ. ಲ. ವ. ಪ್ರಾಚೀನದ ತನಕ)ಕೂಡ ಬಹು ವಿಸ್ತಾರವಾಗಿ ವ್ಯಾಪಿಸಿವೆ. ಇವುಗಳಲ್ಲಿ ಕೆಳ ಕಾರ್ಬಾನಿಫೆರಸ್ ಮತ್ತು ಮೇಲಿನ ಕಾರ್ಬಾನಿಫೆರಸ್ ಎಂಬ ಎರಡು ಉಪಶ್ರೇಣಿಗಳುಂಟು. ಕೆಳಹಂತದಲ್ಲಿ ಸಮುದ್ರಿಯ ನಿಕ್ಷೇಪಗಳಾದ ಸುಣ್ಣಶಿಲೆ ಮತ್ತು ಜೇಡುಶಿಲಾಸ್ತರಗಳೂ ಮೇಲಿನ ಹಂತದಲ್ಲಿ ಅಸಂಖ್ಯಾತ ಕಲ್ಲಿದ್ದಲಿನ ಸಿರಗಳಿಂದ ಕೂಡಿದ ಜೇಡು ಹಾಗೂ ಮರಳು ಶಿಲಾಸ್ತರಗಳೂ ಇವೆ. ಪರ್ಮಿಯನ್ ಕಲ್ಪದ (ಸುಮಾರು 280 ದ.ಲ.ವ. ಪ್ರಾಚೀನದಿಂದ 225 ದ.ಲ.ವ. ಪ್ರಾಚೀನದ ತನಕ) ಶಿಲೆಗಳಲ್ಲಿ ಒಣ ಹವೆಯ ಲಕ್ಷಣಗಳನ್ನು ಕಾಣಬಹುದು. ಈ ಹವೆಯ ಸೂಚಕವಾದ ಕೆಂಪು ಮರಳು ಶಿಲಾಸ್ತರಗಳು ಹಾಗೂ ಜೇಡುಶಿಲಾಸ್ತರಗಳು ದೇಶದ ಉತ್ತರ ಭಾಗದಲ್ಲಿವೆ. ದಕ್ಷಿಣ ಭಾಗದಲ್ಲಿ ಫ್ಯೂಸಲೈನಾ ಅವಶೇಷಗಳಿಂದ ಕೂಡಿದ ದಿಬ್ಬದ ಸುಣ್ಣಶಿಲಾಸ್ತರಗಳಿವೆ. ಈ ಕಾಲದಲ್ಲಿ ತಲೆದೋರಿದ ಭೂ ಚಟುವಟಿಕೆಗಳ ನಿಮಿತ್ತ ಶಿಲಾಸ್ತರಗಳು ಹಲವಾರು ಕಡೆ ಮಡಿಕೆಗೊಂಡಿರುವುವು. ಉತ್ತಮ ಶಿಲಾಮಡಿಕೆಗಳನ್ನು ಜೋಂಗಲ್ ಡಕ್ ಮತ್ತು ಮರಾಸ್ ಪ್ರದೇಶಗಳಲ್ಲಿ ಕಾಣಬಹುದು. ಸತತ ಭೂ ಸವೆತದ ಕಾರಣ ಆಳದಲ್ಲಿ ಹುದುಗಿದ್ದ ಹಲವಾರು ಅಗ್ನಿ ಶಿಲಾ ಸಮುದಾಯಗಳು ಹೊರಕಂಡಿವೆ. ಇವುಗಳಲ್ಲಿ ಬಹು ಮುಖ್ಯವಾದವು-ರ್ಹೊಡೋಪ್, ಸೈಕ್ಲೇಡ್ಸ್, ಅಲ್ಡಿನ್ ಮುಂತಾದ ಬೆಟ್ಟಗಳು. ದೇಶದ ಉತ್ತರ ಭಾಗದಲ್ಲಿರುವ ಟ್ರಯಾಸಿಕ್ ಶ್ರೇಣಿಯಲ್ಲಿ (ಸುಮಾರು 225 ದ.ಲ.ವ. ಪ್ರಾಚೀನದಿಂದ 190 ದ.ಲ.ವ. ಪ್ರಾಚೀನದ ತನಕ) ಗುಂಡುಶಿಲಾಸ್ತರಗಳು. ಮರಳು ಶಿಲಾಸ್ತರಗಳು, ಜೇಡುಶಿಲಾಸ್ತರಗಳು ಮತ್ತು ಸುಣ್ಣಶಿಲಾಸ್ತರಗಳಿವೆ. ಸುಣ್ಣಶಿಲೆಯಲ್ಲಿ ಡಿಪ್ಲೊಪೋರಾ ಅವಶೇಷಗಳು ಅಸಂಖ್ಯಾತ. ಮುಂದೆ ಜೂರಾಸಿಕ್ ಕಲ್ಪದಲ್ಲಿ (ಸುಮಾರು 190 ದ.ಲ.ವ. ಪ್ರಾಚೀನದಿಂದ 135 ದ.ಲ.ವ. ಪ್ರಾಚೀನದ ತನಕ) ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳು ಮುಳುಗಡೆಯಾಗಿ ಸುಣ್ಣಶಿಲೆ ಮತ್ತು ಜೇಡುಶಿಲಾಸ್ತರಗಳು ನಿಕ್ಷೇಪಗೊಂಡವು. ಇದೇ ಭೂಕಾಲದ ವಿಶೇಷ ರೀತಿಯ ಶಿಲಾಸ್ತರಗಳನ್ನು ಟಾರಸ್ ಪರ್ವತಪ್ರದೇಶದಲ್ಲಿ ಕಾಣಬಹುದು. ಈ ಶ್ರೇಣಿಯಲ್ಲಿ ಕೆಂಪುಚರಟಶಿಲೆ, ಸುಣ್ಣಶಿಲೆ ಹಾಗೂ ಜ್ವಾಲಾಮುಖಜ ಟುಫ್ ಮತ್ತು ಲಾವಾಸ್ತರಗಳಿವೆ. ಆದರೆ ಯಾವ ಶಿಲಾಸ್ತರದಲ್ಲಿಯೂ ಉತ್ತಮ ಜೀವ್ಯವಶೇಷಗಳಿಲ್ಲದಿರುವುದು ಅತ್ಯಂತ ಕುತೂಹಲಕಾರಿಯಾದ ಅಂಶವೆನಿಸಿದೆ. ಕ್ರಿಟೇಷಸ್ ಕಲ್ಪದ (ಸುಮಾರು 135 ದ.ಲ.ವ ಪ್ರಾಚೀನದಿಂದ 65 ದ.ಲ.ವ. ಪ್ರಾಚೀನದ ತನಕ) ಮೊದಲ ಹಂತದಲ್ಲೇ ಉತ್ತರ ಟರ್ಕಿಯಲ್ಲಿ ಸಾಮಾನ್ಯ ಪರಿಸ್ಥಿತಿ ಇದ್ದ ಕುರುಹುಗಳಿವೆ. ಈ ಕಲ್ಪದ ಮಧ್ಯಭಾಗದಲ್ಲಿ ಪರ್ವತಜನ್ಯ ಕ್ರಿಯೆ ನಡೆದು ಮುಂದೆ ಕಲ್ಪಾಂತ್ಯದ ವೇಳೆಗೆ ದೇಶದ ಬಹುಭಾಗ ಸಮುದ್ರಾಕ್ರಮಣಕ್ಕೆ ಒಳಗಾಗಿತ್ತು. ಅಲ್ಲದೆ ಜ್ವಾಲಮುಖಿಗಳ ಚಟುವಟಿಕೆಯೂ ತೀವ್ರಗತಿಯಲ್ಲಿ ಮೊದಲಾಗಿ ಇಯೊಸೀನ್ ಕಲ್ಪದವರೆಗೂ (ಸುಮಾರು 65 ದ.ಲ.ವ. ಪ್ರಾಚೀನದಿಂದ 40 ದ.ಲ.ವ.ಪ್ರಾಚೀನದ ತನಕ) ವ್ಯಾಪಿಸಿತ್ತು. ಆ ಕಲ್ಪದ ನಿಕ್ಷೇಪಗಳಲ್ಲಿ ನುಮುಲೈಟಿಸ್ ಜೀವ್ಯವಶೇಶಗಳಿಂದ ಕೂಡಿದ ವಿವಿಧ ಶಿಲಾಸ್ತರಗಳಿವೆ. ಆಲಿ ಗೋಸೀನ್ ಕಲ್ಪದಲ್ಲಿ (ಸುಮಾರು 40 ದ.ಲ.ವ. ಪ್ರಾಚೀನದಿಂದ 25 ದ.ಲ.ವ. ಪ್ರಾಚೀನದ ತನಕ) ಶುಷ್ಕ ವಾತವರಣವಿದ್ದ ಕಾರಣ ದೇಶದ ಅನೇಕ ಭಾಗಗಳಲ್ಲಿ ಜಲಾಶಯಗಳು ಇಮರಿ ಜೇಡುಶಿಲಾಸ್ತರಗಳ ನಡುವೆ ಜಿಪ್ಸಮ್ ಮತ್ತು ಲವಣಸ್ತರಗಳು ಸೇರಿರುವುದನ್ನು ಕಾಣಬಹುದು. ಮಯೊಸೀನ್ ಕಲ್ಪದ (ಸುಮಾರು 25 ದ.ಲ.ವ. ಪ್ರಾಚೀನದಿಂದ 11 ದ.ಲ.ವ. ಪ್ರಾಚೀನದ ತನಕ) ಮೊದಲಲ್ಲೇ ಮತ್ತೊಂದು ಪರ್ವತಜನ್ಯ ಚಟುವಟಿಕೆ ತಲೆದೋರಿತು. ದೇಶದ ಉತ್ತರ ಭಾಗದಲ್ಲಿ ಹಲವಾರು ಕಡೆ ಸಿಹಿನೀರಿನ ಸರೋವರಗಳು ಉಂಟಾದವು. ಇತರೆಡೆ ಸಮುದ್ರೀಯ ಸುಣ್ಣಶಿಲೆ, ಮರಳುಶಿಲೆ, ಮತ್ತು ಮಾರ್ಲ್‍ಸ್ತರಗಳು ನಿಕ್ಷೇಪಗೊಂಡವು. ಇವುಗಳಲ್ಲಿ ಮಯೊಜಿಪ್ಸಿನ ಮತ್ತು ಆಯ್‍ಸ್ಟರುಗಳ ಅವಶೇಷಗಳು ಹುದುಗಿವೆ. ಈ ವೇಳೆಗೆ ದೇಶದ ಆಗ್ನೇಯ ಭಾಗದ ಹೊರತಾಗಿ ಬಹುಭಾಗ ಸ್ಥಿರ ನೆಲಪ್ರದೇಶವಾಗಿ ಮಾರ್ಪಟ್ಟಿದೆ. ಹಲವಾರು ಕಡೆ ನಿಕ್ಷೇಪಗಳಲ್ಲಿ ಸ್ತರಭಂಗಗಳಾದವು. ಈ ಬಿರುಕುಗಳ ಮೂಲಕ ಕಾದ ಶಿಲಾದ್ರವ ಹೊರ ಹೊಮ್ಮಿತು. ಮಯೊಸೀನ್ ಕಡೆಗಾಲ ಹಾಗೂ ಪ್ಲಯೊಸೀನ್ ಕಲ್ಪದಲ್ಲಿ (ಸುಮಾರು 11 ದ.ಲ.ವ. ಪ್ರಾಚೀನದಿಂದ 1 ದ.ಲ.ವ. ಪ್ರಾಚೀನದ ತನಕ) ಮತ್ತೊಂದು ಅಂದರೆ ನಾಲ್ಕನೆಯ ಪರ್ವತಜನ್ಯ ಕ್ರಿಯೆ ತಲೆದೋರಿತು. ಇದರಿಂದ ಆಗ್ನೇಯ ತುರ್ಕಿ, ಇರಾನ್ ಮತ್ತು ಇರಾಕ್‍ಗಳಲ್ಲೂ ಮಹತ್ತರ ಬದಲಾವಣೆಗಳಾದ ಸೂಚನೆಗಳಿವೆ. ಆನಟೋಲಿಯ ಪ್ರದೇಶದಲ್ಲಂತೂ ತೀವ್ರ ಭೂಚಟುವಟಿಕೆಗಳು ಹಾಗೂ ಜ್ವಾಲಾಮುಖಿಗಳ ಕಾರ್ಯಚರಣೆಯನ್ನು ಗುರುತಿಸಲು ಸಾಧ್ಯ.

ನವೀನಭೂಕಲ್ಪದ (ಸುಮಾರು 1 ದ.ಲ.ವ. ಪ್ರಾಚೀನದಿಂದ ಈಚೆಗಿನದು) ನಿಕ್ಷೇಪಗಳಲ್ಲಿ ಮುಖ್ಯವಾದವು ; ರಾಡಿ ತುಂಬಿ ಬತ್ತಿಹೋದ ಸರೋವರಗಳು ಮೇಲಕ್ಕೆತ್ತಲ್ಪಟ್ಟ ಕರಾವಳಿ ಹಾಗೂ ನದಿದಂಡೆಗಳು. 	 
           (ವಿ.ಪಿ.ಜಿ.)

ಭೌಗೋಳಿಕ ಪ್ರದೇಶಗಳು : ಯುರೋಪಿಯನ್ ತುರ್ಕಿ ಸ್ಥೂಲವಾಗಿ ತ್ರಿಕೋಣಾಕಾರದಲ್ಲಿದೆ. ಅದರ ಶೃಂಗಭಾಗ ಬಾಸ್ಫೊರಸ್ ಜಲಸಂಧಿಯ ಕಡೆ ಇದೆ. ಉತ್ತರ ಮತ್ತು ದಕ್ಷಿಣ ಅಂಚುಗಳಲ್ಲಿ ಕ್ರಮವಾಗಿ ಇಸ್ಟ್ರಾಂಜ ಡಾಗ್ಲರೀ ಮತ್ತು ತೆಕಿರ್ ದಾಗ್ ಪರ್ವತ ಶ್ರೇಣಿಗಳಿವೆ. ಮಧ್ಯಭಾಗ ಅಲೆ ಅಲೆಯಾಗಿ ಏರಳಿಯುವ ಬಯಲು. ಇದರ ಮೂಲಕ ಎರ್ಗನೀ ಮತ್ತು ಅದರ ಉಪನದಿಗಳು ಹರಿಯುತ್ತವೆ. ಎರ್ಗನೀ ನದಿ ಪಶ್ಚಿಮದಲ್ಲಿ ಮರೀಟ್ಸ್ ನದಿಯನ್ನು ಸೇರುತ್ತದೆ. ಇನ್ನೊಂದು ಉಪನದಿ ತುಂಜಾ. ಇವುಗಳ ಪೂರ್ವಕ್ಕಿರುವ ತಗ್ಗುಭೂಮಿಯೊಂದೇ ಪಶ್ಚಿಮದಿಂದ ಇಸ್ತಾನ್‍ಬುಲ್ ನಗರಕ್ಕೆ ಇರುವ ಸಂಪರ್ಕ ಮಾರ್ಗ. ಇಸ್ತಾನ್‍ಬುಲ್‍ನಿಂದ ಪಶ್ಚಿಮಕ್ಕೆ 40 ಕಿಮೀ. (25 ಮೈ.) ದೂರದಲ್ಲಿರುವ 183 ಮೀ. ಎತ್ತರದ ಬೆಟ್ಟಸಾಲು ಪರ್ಯಾಯದ್ವೀಪಕ್ಕೆ ಅಡ್ಡಲಾಗಿ ಹಬ್ಬಿದೆ.

ಏಷ್ಯನ್ ತುರ್ಕಿ (ಆನಟೋಲಿಯ) ಸ್ಥೂಲವಾಗಿ ಚತುರ್ಭುಜಾಕಾರದಲ್ಲಿದೆ. ಇದರ ಮಧ್ಯದಲ್ಲಿರುವ ಪ್ರಸ್ಥಭೂಮಿಯ ಸರಾಸರಿ ಎತ್ತರ 900 ಮೀ. (3,000 ಅಡಿ). ಇದು ಈ ಪರ್ಯಾಯದ್ವೀಪದ ಬಹುಭಾಗವನ್ನಾಕ್ರಮಿಸಿಕೊಂಡಿದೆ. ಇದರ ತಗ್ಗಾದ ಜವುಗು ಪ್ರದೇಶಗಳಲ್ಲಿ ತೆಟ್ಟೆಯಾದ ಸರೋವರಗಳಿವೆ. ಇಲ್ಲಿಯ ಅತ್ಯಂತ ದೊಡ್ಡ ಸರೋವರವೆಂದರೆ ಆಂಕರ ನಗರದ ದಕ್ಷಿಣಕ್ಕೆ 97 ಕಿಮೀ. ದೂರದಲ್ಲಿ, ಪ್ರಸ್ಥಭೂಮಿಯ ಮಧ್ಯದಲ್ಲಿರುವ ಪ್ರದೇಶ ಅಲೆಅಲೆಯಾಗಿ ಏರಿಳಿಯುತ್ತದೆ. ಇದು ಸಮುದ್ರಮಟ್ಟದಿಂದ 1,070-1,370 ಮೀ. ಎತ್ತರವಾಗಿದೆ. ಸು. 1,830 ಮೀ. ಎತ್ತರದ ಶಿಖರಗಳುಂಟು. ಆಂಕರದ ದಕ್ಷಿಣ ಮತ್ತು ಪೂರ್ವದಲ್ಲಿ ನಂದಿಹೋದ ಅಗ್ನಿಪರ್ವತಗಳಿವೆ. ಅಲ್ಲಿಯ ಎರ್ಜೀಯಾಸ್‍ದಾಗೀ ಶಿಖರದ ಎತ್ತರ 3916 ಮೀ. ಉತ್ತರ ಮತ್ತು ಈಶಾನ್ಯದಲ್ಲಿ ಸಿವಾಸ್ ನಗರದ ಕಡೆಗೆ ಪ್ರಸ್ಥಭೂಮಿ ಏರುತ್ತದೆ. ಆಮಸಿಯ ಕಡೆಗೆ ಮುಂದುವರಿದಂತೆ ಮತ್ತೆ ತಗ್ಗುತ್ತದೆ. ಸಿವಾಸ್ ಬಳಿಯಲ್ಲಿ ಕಜಿóಲ್ ಇರ್ಮಾಕ್ ನದಿಯ ಪ್ರದೇಶದ ಎತ್ತರ 13,70 ಮೀ. 
ಬಾಸ್ಫೊರಸ್ ಜಲಸಂಧಿಗೂ ಸೋವಿಯತ್ ದೇಶದ ಗಡಿಗೂ ನಡುವಣ ಕಪ್ಪುಸಮುದ್ರ ಕರಾವಳಿಯ ಉದ್ದ ಸುಮಾರು 1.200 ಕಿಮೀ. ಇದರ ಪಶ್ಚಿಭಾಗದಲ್ಲಿರುವ ಆಡಪಾಜûರೀ ಬಯಲು ಪ್ರದೇಶದಲ್ಲಿ ಇಜ್óಮಿತ್ ಖಾರಿಗೂ ಕಪ್ಪುಸಮುದ್ರಕ್ಕೂ ನಡುವೆ ಸಕಾರ್ಯನೆಹ್ರಿನದಿ ಹರಿಯುತ್ತದೆ. ಎರೆಗ್ಲೀ ಈನೆಬೊಲೂ ಇವುಗಳ ನಡುವಣ ಪರ್ವತ 914 ಮೀ ವರೆಗೂ ಎತ್ತರವಾಗಿದೆ. ಈ ನೆಬೊಲೂಗೆ ಪೂರ್ವದಲ್ಲಿ ಕರಾವಳಿ ಪರ್ವತ ಶ್ರೇಣಿ ಕಡಲಿನಿಂದ ತುಂಬ ಕಡಿದಾಗಿ ಏರಿ, 48 ಕಿಮೀ. ಆಚೆಗೆ ಒಳನಾಡಿನ ಥಟ್ಟನೆ ಇಳಿಯುತ್ತದೆ. ಬಾಫ್ರಾ ಬಳಿ ಕಿಜಿóಲ್ ಇರ್ಮಾಕ್ ನದಿ ಸಮುದ್ರ ಸೇರುತ್ತದೆ. ಇದೂ ಸಾಮ್ಸೂನ್ ಪ್ರಾಂತ್ಯವೂ ನದೀಮುಖಜೀಯ ಮೈದಾನಗಳು. ಆರ್ಡೊವಿನಿಂದ ಪೂರ್ವಕ್ಕೆ ಸೋವಿಯತ್ ಗಡಿಯ ವರೆಗಿನ ಕರಾವಳಿ ಪರ್ವತ ಶ್ರೇಣಿ 3,000-4,000 ಮೀ. ಎತ್ತರವಾಗಿದೆ. ಕರಾವಳಿ ಶ್ರೇಣಿಗೂ ಅದಕ್ಕೆ ದಕ್ಷಿಣದಲ್ಲಿರುವ ಜ್ವಾಲಾಮುಖೀಯ ಶ್ರೇಣಿಗಳಿಗೂ ನಡುವೆ ಕೆಲ್ಕೀಟ್ ಮತ್ತು ಕೋರುಕ್ ನದಿಗಳು ಹರಿಯುತ್ತವೆ. 

ಪೂ. ರೇ. 300ಗೆ ಪಶ್ಚಿಮದಲ್ಲಿರುವ ಪ್ರದೇಶವೇ ಪಶ್ಚಿಮ ಅನಟೋಲಿಯ, ಇಜೀóಯನ್ ಕರಾವಳಿಯಿಂದ ಮಧ್ಯ ಪ್ರಸ್ಥಭೂಮಿಯವರೆಗಿನ ಪ್ರದೇಶವಿದು. ಇಲ್ಲಿಯ ಸಮುದ್ರತೀರ ತುಂಬ ಅಂಕುಡೊಂಕಾಗಿದೆ. ಮಾರ್ಮರ ಸಮುದ್ರದ ದಕ್ಷಿಣಕ್ಕಿರುವ ಪ್ರದೇಶ ಹೆಚ್ಚು ತಗ್ಗು. ಪೂರ್ವದ ಪ್ರದೇಶ ಹೆಚ್ಚು ಎತ್ತರ. ಇಲ್ಲಿ ಬುರ್ಸಾ ಬಯಲಿನ ನಡುವೆ ಎದ್ದು ನಿಂತಿರುವ ಊಲ ದಾಗ್ ಪರ್ವತ ಶಿಖರದ ಎತ್ತರ 8,343 ಅಡಿ. ಕರಾವಳಿಯ ಬರ್ಗಾಮ ಬಯಲು ಫಲವತ್ತಾದ್ದು. ಇಜ್óಮಿರ್‍ಗೆ ಪೂರ್ವದ ಪ್ರದೇಶದ ಆಚೀಚೆ ಎರಡು ಪರ್ವತ ಶ್ರೇಣಿಗಳಿವೆ. ಬಯುಕ್ ಮೆಂಡರಸ್ ನದಿಯ ದಕ್ಷಿಣಕ್ಕಿರುವ ಪ್ರದೇಶ ಪರ್ವತಮಯ.
ಮಧ್ಯ ಪ್ರಸ್ಥಭೂಮಿಯ ದಕ್ಷಿಣದ ಅಂಚಿನ ಹಿಂಬದಿಯಲ್ಲಿ ವಿಶಾಲ ವೃತ್ತದಂತೆ ಸಾಗುವ ಆಫ್ಯೋಂಕಾರಹಿಸಾರ್ - ಕಾನ್ಯಾ- ಕಾರಮಾನ್- ಕೈಸೆರೀ ರೈಲು ಮಾರ್ಗಕ್ಕೂ ಸಮುದ್ರಕ್ಕೂ ನಡುವೆ ಇರುವ ಪರ್ವತ ಶ್ರೇಣಿ ಟಾರಸ್. ಪಶ್ಚಿಮದಲ್ಲಿರುವ ಡಾಲಮಾನ್ ನದೀ ಕಣಿವೆಗೂ ಇದಕ್ಕೆ ಪೂರ್ವದಲ್ಲಿರುವ ಸಿಲೀಫ್ಕೀ ಪಟ್ಟಣಕ್ಕೂ ನಡುವೆ ಅಲ್ಲಲ್ಲಿ ಬೇರೆ ಬೇರೆಯಾದ ಪರ್ವತಗಳ ಸಮೂಹವೊಂದಿದೆ. ಸೆಹಾನ್- ಜೇಹಾನ್ ನದಿಗಳ ಮುಖಜಭೂಮಿಯ ಬಳಿ ಎತ್ತರವಾಗಿ ಮೇಲೆದ್ದಿವೆ. ಈ ಶ್ರೇಣಿಯನ್ನು ಕತ್ತರಿಸುವ ಕ್ಯಾಕಿಟ್ ಕಂದರದ ಮೂಲಕ ಮಧ್ಯಪ್ರಸ್ಥಭೂಮಿಯಿಂದ ಸಮುದ್ರಕ್ಕೆ ಮಾರ್ಗ ಏರ್ಪಟ್ಟಿದೆ. ಈ ಕಂದರದ ಈಶಾನ್ಯದಲ್ಲಿ ಟಾರಸ್ ಶ್ರೇಣಿ 3,600 ಮೀ.ಗೂ ಹೆಚ್ಚು ಎತ್ತರವಾಗಿದೆ. ಸೇಹಾನ್- ಜೇಹಾನ್ ಮುಖಜಭೂಮಿಗಿಂತ ಆಚೆ ಟಾರಸ್ ಪರ್ವತ ಎರಡು ಸೀಳಾಗಿ ಒಡೆಯುತ್ತದೆ. ಇದರಲ್ಲಿ ಒಂದು ಈಶಾನ್ಯಭಿಮುಖವಾಗಿ ಪೂರ್ವ ಆನಟೋಲಿಯದ ಮಧ್ಯಕ್ಕೆ ಹಬ್ಬಿದೆ. ಇದರ ಹೆಸರು ಪೂರ್ವ ಟಾರಸ್. ಇನ್ನೊಂದು ಶಾಖೆ ಆಗ್ನೇಯ ಟಾರಸ್ ಅಥವಾ ಆಂಟಿ -ಟಾರಸ್.

ಆಗ್ನೇಯ ತುರ್ಕಿಯ ದಕ್ಷಿಣದಲ್ಲಿ ಸಿರಿಯ ಮತ್ತು ಇರಾಕ್‍ಗಳೂ ಪೂರ್ವದಲ್ಲಿ ಇರಾನ್ ದೇಶವೂ ಉತ್ತರದಲ್ಲಿ ಆಗ್ನೇಯ ಟಾರಸ್ ಶ್ರೇಣಿಯೂ ಇವೆ. ಈ ಶ್ರೇಣಿಯಲ್ಲಿ ಟೈಗ್ರಿಸ್ ಮತ್ತು ಅದರ ಉಪನದಿಗಳು ಉಗಮಿಸುತ್ತವೆ. ಇದರ ಪಶ್ಚಿಮಕ್ಕೆ ಅಲೆ ಅಲೆಯಾಗಿ ಏರಿಳಿಯುವ ಪ್ರಸ್ಥಭೂಮಿಯಲ್ಲಿ ಯುಫ್ರೇಟೀಸ್ (ಫಿರಾತ್ ನೇಹ್‍ರೀ) ಹರಿಯುತ್ತದೆ. ಈ ನದಿಗೂ ಟೈಗ್ರಿಸ್ ಕಣಿವೆಗೂ ನಡುವೆ ಇರುವ ಪ್ರದೇಶ ಸುಣ್ಣಕಲ್ಲಿನ ಬೋಳು ದಿಣ್ಣೆ. ಇದರ ಉನ್ನತ ಬಿಂದುವೆಂದರೆ ಕಾರಜ ದಾಗ್ ಶಿಖರ ತುದಿ. ಟೈಗ್ರಿಸ್‍ಗೆ ಪೂರ್ವದ ನೆಲ ಕ್ರಮವಾಗಿ ಮೇಲೇರಿ, 4,000 ಮೀ ಗಿಂತ ಎತ್ತರದ ಶಿಖರಗಳಿರುವ ಪರ್ವತರಾಶಿಯಾಗಿ ಪರಿಣಮಿಸುತ್ತವೆ. ಇದು ಇರಾನಿನಲ್ಲಿ ಜಾóಗ್ರೋಸ್ ಪರ್ವತವಾಗಿ ಮುಂದುವರಿಯುತ್ತದೆ ಆಗ್ನೇಯ ಕೊನೆಯಲ್ಲಿ ಹರಿಯುವ ಗ್ರೇಡ್ ಜಾಬ್ ನದಿ ಆಳವಾದ ಕಂದರದಲ್ಲಿ ಹರಿದು ಇರಾಕನ್ನು ಪ್ರವೇಶಿಸುತ್ತದೆ. 

ಆಗ್ನೇಯ ತುರ್ಕಿಗೆ ಉತ್ತರದಲ್ಲಿರುವ ಪೂರ್ವ ತುರ್ಕಿ ಪ್ರದೇಶವೇ ಪೂರ್ವ ಆನಟೋಲಿಯ. ಇದು ಕೆಲ್ಕಿಟ್ ಮತ್ತು ಕೋರ್ ನದಿ ಕಣಿವೆಗಳ ವರೆಗೆ ಹಬ್ಬಿರುವ ಪ್ರದೇಶ. ಇದು ಜ್ವಾಲಾಮುಖೀಯ ಪ್ರದೇಶ. ಕೆಲವು ಅಗ್ನಿಪರ್ವತ ಶಿಖರಗಳು ಎತ್ತರವಾಗಿವೆ. ಅಲ್ಲಲ್ಲಿ ಜ್ವಾಲಾಮುಖೀತರ ಮೂಲದ ಶ್ರೇಣಿಗಳೂ ಉಂಟು. ಈ ಪ್ರದೇಶ ತುರ್ಕಿಯ ಚಾವಣಿಯಂತಿದೆ. ಇದರ ಸರಾಸರಿ ಎತ್ತರ 6,000 ಅಡಿ. ವ್ಯಾನ್ ಗಲೂಗೆ (ಸರೋವರ) ಉತ್ತರದಲ್ಲಿ ಅರರಾತ್ ಶಿಖರದ ಸನಿಯದಲ್ಲಿ ಮುರಾತ್ ನೇಹ್‍ರೀ ನದಿ ಉಗಮಿಸುತ್ತದೆ. ಈ ನದಿ 250 ಮೈಲಿ ಹರಿದು ಯುಫ್ರೇಟೀಸóನ್ನು ಸೇರುತ್ತದೆ. ಅರರಾತ್ ಶಿಖರ ಹಿಮಾವೃತ. ಇದರ ಎತ್ತರ 5,165 ಮೀ. ತುರ್ಕಿಯ ಅತ್ಯುನ್ನತ ಶಿಖರ ಇದು. ವ್ಯಾನ್ ಸರೋವರ 1,720 ಮೀ ಎತ್ತರದಲ್ಲಿದೆ. ಇದು ಭೂ ಆವೃತ. ಇದರಲ್ಲಿ ಸೋಡದ ಅಂಶ ಅಧಿಕ.

ವಾಯಗುಣ : ತುರ್ಕಿಯ ದಕ್ಷಿಣ ಕರಾವಳಿಯದು ಮೆಡಿಟರೇನಿಯನ್ ವಾಯುಗುಣ. ಇಜೀಯನ್ ಕರಾವಳಿಯಲ್ಲೂ ಉತ್ತರದಲ್ಲಿರುವ ಇಜ್óಮಿರ್ ವರೆಗಿನ ಪ್ರದೇಶದಲ್ಲೂ ಬಹಳಮಟ್ಟಿಗೆ ಇದೇ ವಾಯುಗುಣವಿದೆ. ಈ ಪ್ರದೇಶದ ಸರಾಸರಿ ಉಷ್ಣತೆ 630 -680 ಈ ; ವಾರ್ಷಿಕ ಮಳೆ 27.6"-43.3". ಉತ್ತರ ಇಜೀಯನ್ -ಮಾರ್ಮರ ಪ್ರದೇಶ ಹೆಚ್ಚು ತಂಪು; ಹೆಚ್ಚು ಆರ್ಧ. ಇಲ್ಲಿಯ ಸರಾಸರಿ ಉಷ್ಣತೆ 570-630 ಈ ; ವಾರ್ಷಿಕ ಮಳೆ 21.6"-27.6". ಕಪ್ಪು ಸಮುದ್ರತೀರ ಪ್ರದೇಶದ ಉಷ್ಣತೆಯೂ ತೀವ್ರವಾಗಿಲ್ಲ. (570-590 ಈ). ಇಲ್ಲಿ ಮಳೆ ಹೆಚ್ಚು (27.6"-98.4"). ಮಧ್ಯ ಆನಟೋಲಿಯನ್ ಪ್ರಸ್ಥಭೂಮಿಯಲ್ಲಿ ಬೇಸಗೆಯಲ್ಲಿ ಸೆಕೆ ಹೆಚ್ಚು ; ಶುಷ್ಕತೆಯೂ ಅಧಿಕ. ಚಳಿಗಾಲದಲ್ಲಿ ಹೆಚ್ಚು ಚಳಿ. ಉಷ್ಣತೆ 460-540ಈ ; ಮಳೆ 11.8"-29.5". ಪೂರ್ವತುರ್ಕಿಯಲ್ಲಿ ಶೈತ್ಯ ಹೆಚ್ಚು (390-480 ಈ). ಕಣಿವೆಗಳು ಮಾತ್ರ ಬೆಚ್ಚಗಿವೆ. ಇಲ್ಲಿ ಮಳೆ 15.7"-19.7".

ಸಸ್ಯಪ್ರಾಣಿಲೋಕ : ತುರ್ಕಿಯ ಸಸ್ಯರಾಶಿ ವೈವಿಧ್ಯಮಯವಾದ್ದು. ಉಪೋಷ್ಣವಲಯದ ಸಸ್ಯಗಳಿಂದ ಸಮಶೀತೋಷ್ಣ ವಲಯದವುಗಳ ವರೆಗೆ, ಮರುಭೂಮಿ ಸಸ್ಯಗಳಿಂದ ಆಲ್ಪೈನ್ ಸಸ್ಯಗಳ ವರೆಗೆ ನಾನಾ ಬಗೆಯ ಮರ ಗಿಡಗಳು ಇಲ್ಲಿವೆ. ದಕ್ಷಿಣ, ವಾಯವ್ಯ ಮತ್ತು ಉತ್ತರ ತುರ್ಕಿಯ ಪರ್ವತಗಳಲ್ಲಿ ವಾಣಿಜ್ಯ ಪ್ರಾಮುಖ್ಯವುಳ್ಳ ಶಂಕುಧಾರಿ ವೃಕ್ಷಗಳ ಕಾಡುಗಳು ವ್ಯಾಪಕವಾಗಿಯೂ ಪರ್ಣಪಾತಿ ಮರಗಳ ಕಾಡುಗಳು ಸ್ವಲ್ಪಮಟ್ಟಿಗೂ ಇವೆ. ಅತಿಮಧುರ, ವ್ಯಾಲೊನಿಯ, ಓಕ್, ಕಾಡು ಆಲಿವ್ ಇವು ಆಗ್ನೇಯದಲ್ಲಿ ಬೆಳೆಯುತ್ತವೆ. ಇಲ್ಲಿರುವ ಮುಖ್ಯ ವನ್ಯ ಮೃಗಗಳು ಜಿಂಕೆ, ಮಾರ್ಫಲಾನ್, ಮಾರ್ಟೆನ್, ಲಿಂಕ್ಸ್, ನೀರು ನಾಯಿ, ಕಾಡುಹಂದಿ, ಮೊಲ, ತುರ್ಕಿ ಚಿರತೆ, ಕಂದು ಕರಡಿ, ತೋಳ, ಕೆಂಪುನರಿ, ಗಜûಲ್, ಮಾರ್ಟಿನ್, ಕಾಡುಬೆಕ್ಕು, ಲಿಂಕ್ಸ್, ನೀರುನಾಯಿ ಮತ್ತು ಬ್ಯಾಡ್ಜರ್. ಹಕ್ಕಿಗಳು ಹಿಮಗೌಜಲ, ಸಿಪ್ಲೆ ಹಕ್ಕಿ, ಗುನಾ ಹದ್ದು, ಕಾಡುಕೋಳಿ, ಉಲ್ಲಂಗಿ, ಹುಂಡುಕೋಳಿ, ಬಾತು ಕೋಳಿ, ಪಾರಿವಾಳ ಮುಂತಾದವು. ಮೂವತ್ತು ಬಗೆಯ ಹಾವುಗಳು ಇವೆ. ಜೇನನ್ನೂ ರೇಷ್ಮೆ ಹುಳುಗಳನ್ನೂ ಜನ ಸಾಕುತ್ತಾರೆ.

ಜನ, ಜೀವನ : ತುರ್ಕಿಯ ಆದಿಕಾಲದ ಆಕ್ರಮಣಕಾರರು ಬಹುಶ: ಯೂರೇಷ್ಯದ ಗುಡ್ಡಗಾಡುಗಳಿಂದ ಬಂದಿರಬೇಕು. ಕ್ರಿ.ಪೂ. 1800 ರಲ್ಲಿ ಮೆಸೊಪೊಟೋಮಿಯ ಮತ್ತು ಆನಟೋಲಿಯದಲ್ಲಿ ಸ್ಥಾಪಿತವಾಗಿದ್ದ ಹಿಟೈಟ್ ಸಾಮ್ರಾಜ್ಯದ ಅವನತಿಯ ತರುವಾಯ ಫ್ರಿಜಿಯದ ಆಕ್ರಮಣಕಾರರು ಹಾಗೂ ಗ್ರೀಸಿನ ನಿರಾಶ್ರಿತರು ಬಂದು ನೆಲೆಸಿದರು. ತರುವಾಯ ನೆಲಸಿದವರು ಪರ್ಷಿಯನ್ನರು, ಮ್ಯಾಸಿಡೋನಿಯದವರು, ರೋಮನರು, ಅರಬರು ಹಾಗೂ ಸೆಲ್ಜುಕ್ ತುರ್ಕರು. ಇಲ್ಲಿಯ ಜನ ಸಾಮಾನ್ಯವಾಗಿ ಗಟ್ಟಿಮುಟ್ಟಾಗಿರುತ್ತಾರೆ. ಇವರದು ದುಂಡು ತಲೆ, ಕಂದು ಕಣ್ಣು, ನೀಳ ಮೂಗು. 
ಇಲ್ಲಿಯ ಪ್ರಮುಖ ಭಾಷೆ ಆಟೊಮನ್ ತುರ್ಕಿ ಭಾಷಾಗುಂಪಿಗೆ ಸೇರಿದ ತುರ್ಕಿ. ಈ ಭಾಷೆಗೆ 1928 ರಲ್ಲಿ ಅರಬ್ಬಿ ಲಿಪಿಯ ಬದಲು ರೋಮನ್ ಲಿಪಿಯನ್ನು ಅಳವಡಿಸಿಕೊಳ್ಳಲಾಯಿತು.

ರಾಷ್ಟ್ರದ ಜನಸಂಖ್ಯೆಯ ಮುಕ್ಕಾಲುಭಾಗದ ಜನ ಗ್ರಾಮವಾಸಿಗಳು. ಕೈಗಾರಿಕಾನಗರಗಳು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಗ್ರಾಮಗಳಲ್ಲಿ ವ್ಯವಸಾಯ, ಮೀನುಗಾರಿಕೆ, ಪಶುಪಾಲನೆ ಮುಖ್ಯ ಕಸುಬುಗಳು. ಜನಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳು ಕಪ್ಪು ಸಮುದ್ರದ ಪೂರ್ವ ಭಾಗ, ಮಾರ್ಮರ್ ಸಮುದ್ರ ತೀರದ ಬಯಲು, ಇಜೀಯನ್ ಕರಾವಳಿ ನಗರಗಳು, ಆಡನ ಹಾಗೂ ಆಂಟಕ್ಯಾ ಪ್ರಸ್ಥಭೂಮಿ. ಪ್ರಪಂಚದ ಅತ್ಯಂತ ಹೆಚ್ಚಿನ ಜನಸಂಖ್ಯೆ ಏರಿಕೆ ದರ ಇರುವಂಥ ದೇಶಗಳಲ್ಲಿ ತುರ್ಕಿಯೂ ಒಂದು. 1927 ರಲ್ಲಿ ಇದರ ಜನಸಂಖ್ಯೆ 1,36,48,000 ಇದ್ದದ್ದು, 1970ರ ವೇಳೆಗೆ 3,50,00,000 ವನ್ನೂ ಮೀರಿತು. 1950 ರಿಂದ 1970ರ ವರೆಗಿನ ಅವಧಿಯಲ್ಲಿ ಜನಸಂಖ್ಯೆ ಬೆಳವಣಿಗೆಯ ವಾರ್ಷಿಕ ಸರಾಸರಿ ದರ ಪ್ರತಿ 1,000 ಕ್ಕೆ ಸುಮಾರು 27. ಈ ಹೆಚ್ಚಿನ ಏರಿಕೆ ದರಕ್ಕೆ ಕಾರಣವಾದ್ದು ಹೆಚ್ಚಿನ ಜನಪದರ (ಪ್ರತಿ 1,000ಕ್ಕೆ 40). ಸರಾಸರಿ ಮರಣ ದರ ಗ್ರಾಮಪ್ರದೇಶದಲ್ಲಿ ಪ್ರತಿ 1,000 ಕ್ಕೆ 15, ಪಟ್ಟಣಗಳಲ್ಲಿ 11. ನೈಸರ್ಗಿಕವಾಗಿ ಜನಸಂಖ್ಯೆ ಏರುತ್ತಿರುವ ಇತರ ದೇಶಗಳಂತೆ ಇಲ್ಲೂ ಕಡಿಮೆ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 30 ಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟು ಜನ ಸಂಖ್ಯೆಯಲ್ಲಿ ಸುಮಾರು 66 % (1970). 60 ಕ್ಕಿಂತ ಹೆಚ್ಚಿನ ವಯಸ್ಸಿನವರು ಕೇವಲ 7.2%, ಜನಸಾಂದ್ರತೆ 1927 ರಲ್ಲಿ ಚ.ಮೈ.ಗೆ 45 ಇದ್ದದ್ದು 1970ರ ವೇಳೆಗೆ 118ಕ್ಕೆ ಏರಿತ್ತು. ಆದರೆ ಇತರ ಪ್ರದೇಶಗಳೊಂದಿಗೆ ಹೋಲಿಸಿದಾಗ ತುರ್ಕಿಯ ಜನಸಾಂದ್ರತೆ ಹೆಚ್ಚೇನೂ ಅಲ್ಲ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಒಂದು ಮುಖ್ಯ ಪ್ರವೃತ್ತಿಯೆಂದರೆ ಗ್ರಾಮಪ್ರದೇಶದಿಂದ ಪಟ್ಟಣಗಳಿಗೆ ಜನರ ವಲಸೆ. ಇದು ಕೈಗಾರೀಕರಣದ ಪರಿಣಾಮ.

ತುರ್ಕಿಯ ಶೇಕಡ 99 ಕ್ಕಿಂತ ಹೆಚ್ಚು ಮಂದಿ ಮುಸಲ್ಮಾನರು ; ಸುನ್ನಿ ಪಂಗಡದವರು ಅಧಿಕ. 1923ರಲ್ಲಿ ಗಣರಾಜ್ಯ ಸ್ಥಾಪನೆಯಾದ ಮೇಲೆ ಮತವನ್ನು ರಾಜ್ಯದಿಂದ ಪ್ರತ್ಯೇಕಗೊಳಿಸಲಾಯಿತು. ರೋಮನ್ ಕ್ಯಾತೊಲಿಕರೂ ಪ್ರಾಟೆಸ್ಟಂಟರೂ ಯೆಹೂದ್ಯರೂ ಇಸ್ತಾನ್‍ಬುಲ್ ಹಾಗೂ ಇeóïಮಿರ್ ನಗರಗಳಲ್ಲಿ ಹೆಚ್ಚು.

	ಸಂವಿಧಾನ, ಆಡಳಿತ : ತುರ್ಕಿ ಗಣರಾಜ್ಯ. 1961ರ ಸಂವಿಧಾನದ ಪ್ರಕಾರ ರಾಜ್ಯಾಧಿಕಾರ ನಿಹಿತವಾಗಿರುವುದು ಮಹಾ ರಾಷ್ಟ್ರೀಯ ಸಭೆಯಲ್ಲಿ. ಇದು ದ್ವಿಸನದ ಸಭೆ. ಕೆಳಮನೆ ರಾಷ್ಟ್ರೀಯ ಸಭೆ. ಇದರ ಸದಸ್ಯರ ಸಂಖ್ಯೆ 450. ಮೇಲ್ಮನೆ ಸೆನೆಟ್. ಇದರಲ್ಲಿ 165 ಸದಸ್ಯರಿರುತ್ತಾರೆ. ಇವರಲ್ಲಿ 150 ಜನ ಚುನಾಯಿತ ಸದಸ್ಯರು. ಉಳಿದ 15 ಸದಸ್ಯರು ಗಣರಾಜ್ಯಾಧ್ಯಕ್ಷನಿಂದ ನಾಮಕರಣ ಹೊಂದಿದವರು. ಕೆಲವರು ಅಜೀವ ಸೆನೇಟರುಗಳು. 1960ರ ಕ್ರಾಂತಿಯನ್ನು ಆಗಮಾಡಿಸಿದ ಸೈನ್ಯಾಧಿಕಾರಿಗಳು ಇವರು. ಗಣರಾಜ್ಯದ ಅಧ್ಯಕ್ಷನೇ ರಾಷ್ಟ್ರಪತಿ. ಇವನನ್ನು ಏಳು ವರ್ಷಗಳ ಅವಧಿಗೆ ಮಹಾ ರಾಷ್ಟ್ರೀಯ ಸಭೆ ಆಯ್ಕೆ ಮಾಡುತ್ತಾರೆ. ಅನುಕ್ರಮವಾಗಿ ಎರಡನೆಯ ಅವಧಿಗೆ ಅವನು ಅಧ್ಯಕ್ಷನಾಗತಕ್ಕದಲ್ಲ. ಪ್ರಧಾನ ಮಂತ್ರಿಯನ್ನು ಅಧ್ಯಕ್ಷ ಆರಿಸುತ್ತಾನೆ. ರಾಷ್ಟ್ರೀಯ ಸಭೆಯ ಮಂಜೂರಾತಿಗೆ ಒಳಪಟ್ಟು ಅವನು ಸರ್ಕಾರ ರಚಿಸುತ್ತಾನೆ. ರಾಷ್ಟ್ರೀಯ ಸಭೆಗೆ ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆ ನಡೆಯುತ್ತದೆ. ಸೆನೇಟಿನ ಮೂರನೆಯ ಒಂದರಷ್ಟು ಸಂಖ್ಯೆಯ ಸದಸ್ಯರನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. 1946ರ ವರೆಗೆ ತುರ್ಕಿ ಏಕಪಕ್ಷ ರಾಜ್ಯವಾಗಿತ್ತು. ಅಲ್ಲಿಂದೀಚೆಗೆ ಅನೇಕ ಪಕ್ಷಗಳು ಚುನಾವಣೆಗಳಲ್ಲಿ ಭಾಗವಹಿಸುತ್ತಿವೆ.

ತುರ್ಕಿಯ ನ್ಯಾಯಾಂಗ ವ್ಯವಸ್ಥೆ ಅಲ್ಲಿಯ ಶಾಸಕಾಂಗ ಮತ್ತು ಆಡಳಿತಂಗದಿಂದ ಸ್ವತಂತ್ರವಾದ್ದು. ಅದು ಸ್ವಿಸ್ ದಿವಾಣಿ ಸಂಹಿತೆ, ಇಟಾಲಿಯನ ದಂಡ ಸಂಹಿತೆ, ಜರ್ಮನ್ ವಾಣಿಜ್ಯ ನ್ಯಾಯ ಇವುಗಳ ಆಧಾರದ ಮೇಲೆ ರಚಿತವಾಗಿದೆ. ಸಂವಿಧಾನಾತ್ಮಕ ನ್ಯಾಯಾಲಯವೇ ರಾಜ್ಯದ ಪರಮೋಚ್ಚ ನ್ಯಾಯಾಲಯ. ಇದು ಮಹಾ ರಾಷ್ಟ್ರೀಯ ಸಭೆಯ ಆಧಿನಿಯಮಗಳನ್ನು ಪರಿಶೀಲಿಸುವ ಅಧಿಕಾರವುಳ್ಳದ್ದು. ಪರಮೋಚ್ಚ ಆಡಳಿತ ನ್ಯಾಯಾಲಯವೆಂದರೆ ರಾಜ್ಯಮಂಡಲಿ. (ಕೌನ್ಸಿಲ್ ಆಫ್ ಸ್ಟೇಟ್). ಇದು ಕೆಳ ಆಡಳಿತ ನ್ಯಾಯಾಲಯಗಳ ತೀರ್ಪುಗಳ ಮೇಲ್ಮನವಿಗಳನ್ನು ಪರಿಶೀಲಿಸುವ ನ್ಯಾಯಾಲಯ. ಇತರ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸುವ ಮೇಲ್ಮನವಿ ನ್ಯಾಯಾಲಯವೊಂದಿದೆ. ನ್ಯಾಯ ಸಚಿವಾಲಯದ ಆಡಳಿತಕ್ಕೊಳಪಟ್ಟ ನ್ಯಾಯಾಲಯಗಳು ಸಾಮಾನ್ಯ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಿಸುತ್ತವೆ.
ದೇಶವನ್ನು 67 ಪ್ರಾಂತ್ಯಗಳಾಗಿ (ಇಲೆರ್ ಅಥವಾ ವಿಲಾಯೆತ್) ವಿಂಗಡಿಸಲಾಗಿದೆ. ಪ್ರತಿ ಪ್ರಾಂತ್ಯವೂ ಜಿಲ್ಲೆಗಳಾಗಿಯೂ ಪ್ರತಿ ಜಿಲ್ಲೆಯೂ ಕಮ್ಯೂನುಗಳಾಗಿಯೂ ವಿಂಗಡವಾಗಿವೆ.

ತುರ್ಕಿಯ ಮುಖ್ಯ ಪಟ್ಟಣಗಳು ಮತ್ತು 2000ದ ಜನಗಣತಿಯಂತೆ ಇರುವ ಅಲ್ಲಿನ ಜನಸಂಖ್ಯೆ ಅಂಕರ, ಇeóïಮಿರ್, ಎರಜûರೂಮ್, ಬಾಲಿಕೆಸೀರ್, ಕಾರ್ಸ್, ಇಸ್ತಾನ್‍ಬುಲ್, ಅಡನ, ಸಾಮ್ಸೂನ್, ಜಾಂಗಲ್ ಡಾಕ್, ಬುರ್ಸಾ, ಸೀವಾಕ್ ಮಾನಸಾ. 

ಆರ್ಥಿಕತೆ : ವ್ಯವಸಾಯ: ತುರ್ಕಿಯ ಸೇಕಡ 80 ರಷ್ಟು ಜನರ ಕಸಬು ವ್ಯವಸಾಯ. ಆದರೆ ರಾಷ್ಟ್ರದಲ್ಲಿ ಕೃಷಿಗೆ ಒದಗಿಬಂದಿರುವ ನೆಲ ಸು. 23%. ತುರ್ಕಿ ಮುಖ್ಯವಾಗಿ ಪರ್ವತಪ್ರದೇಶ. ಸಮುದ್ರದಂಚುಗಳಿಗೂ ಜ್ವಾಲಾಮುಖೀಯ ಪ್ರದೇಶಕ್ಕೂ ಫಲವತ್ತಾದ ಭೂಮಿ ಸೀಮಿತವಾಗಿದೆ. ಈಶಾನ್ಯ ಹಾಗೂ ಪೂರ್ವ ಭಾಗಗಳಲ್ಲಿ ಚಳಿಗಾಲ ತುಂಬಾ ತೀವ್ರವಾಗಿದೆ.
ತುರ್ಕಿಯ ಮುಖ್ಯ ಬೆಳೆ ಗೋಧಿ. ಇದು ಇಜೀಯನ್ ಕರಾವಳಿ ಹಾಗೂ ಯುರೋಪ್ ಭಾಗದ ತುರ್ಕಿಯಲ್ಲಿ ಹೆಚ್ಚು ಬೆಳೆಯುತ್ತದೆ. ರೈ, ಓಟ್ಸ್ ಮತ್ತು ಭತ್ತವನ್ನು ಕಪ್ಪು ಸಮುದ್ರ ಹಾಗೂ ಮೆಡಿಟರೇನಿಯನ್ ತೀರಗಳಲ್ಲಿ ಬೆಳೆಯುತ್ತಾರೆ. ದ್ರಾಕ್ಷಿ ಹಾಗೂ ನಿಂಬೆ ಜಾತಿಯ ಹಣ್ಣುಗಳೂ ಬೆಳೆಯುತ್ತವೆ. ವಾಣಿಜ್ಯ ಬೆಳೆಗಳು ಹತ್ತಿ, ಎಳ್ಳು, ಅಗಸೆ, ಸೂರ್ಯಕಾಂತಿ, ಚಹ. ಚರ್ಮ ಹದ ಮಾಡಲು ವಲೋನಿಯ ಎಣ್ಣೆಯನ್ನು ತೆಗೆಯಲು ಓಕ್ ಜಾತಿಯ ಮರಗಳು ತುರ್ಕಿಯಲ್ಲಿ ಹೇರಳವಾಗಿವೆ. ಪ್ರಪಂಚದ 1/2 ಭಾಗದಷ್ಟು ಆಫೀಮು ತುರ್ಕಿಯಲ್ಲಿ ಉತ್ಪಾದನೆಯಾಗುತ್ತದೆ.

ಮೀನುಗಾರಿಕೆ : ಇeóïಮಿರ್, ಬಾಸ್ಫೋರಸ್ ಹಾಗೂ ಕಪ್ಪುಸಮುದ್ರದ ಪೂರ್ವತೀರದಲ್ಲಿ ಪ್ರಮುಖ ಮೀನುಗಾರಿಕೆ ಕೇಂದ್ರಗಳಿವೆ. ಮೀನುಗಳ ಡಬ್ಬೀಕರಣ ಕಾರ್ಖಾನೆಗಳು ಸಕೇ, ಕರ್ಟಲ್ ಹಾಗೂ ಟ್ರ್ಯಾಬ್‍ಜಾನ್ ನಗರಗಳಲ್ಲಿವೆ.
ಖನಿಜಗಳು : ದಾರು ಕಲ್ಲಿದ್ದಲು (ಲಿಗ್ನೈಟ್) ಅಂಕರಕ್ಕೆ ಪಶ್ಚಿಮದಲ್ಲಿ 220 ಮೈ. ದೂರದಲ್ಲಿರುವ ಕೂಟಾಯಾ ನಗರದ ಬಳಿ ಸಿಗುತ್ತವೆ. ತುರ್ಕಿಯ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಕಬ್ಬಿಣದ ಅದುರಿನ ನಿಕ್ಷೇಪಗಳಿವೆ. ತುರ್ಕಿಯ ಇತರ ಖನಿಜಗಳು ಕ್ರೋಮ್, ತಾಮ್ರ, ಸೀಸ, ತವರ ಮತ್ತು ಮ್ಯಾಂಗನೀಸ್, ರಮನ್‍ದಾಗಿ ಪರ್ವತಗಳ ಬಳಿ ತೈಲಗಣಿಗಳಿವೆ. ಬಾತ್‍ಮನ್ ತೈಲ ಶುದ್ಧೀಕರಣ ಕೇಂದ್ರ.

ಕೈಗಾರಿಕೆಗಳು : ತುರ್ಕಿಯಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿವೆ. ಕಾರಬೂಕ್ ಮುಖ್ಯ ಕಬ್ಬಿಣ ಕೇಂದ್ರ. ಆಡನ, ಟಾರ್ಸಸ್, ಇeóïಮೀರ್, ಇಸ್ತಾನ್‍ಬುಲ್, ಕೈಸರೀಗಳಲ್ಲಿ ಹತ್ತಿ ಗಿರಣಿಗಳಿವೆ. ಉಣ್ಣೆ ಗಿರಣಿಗಳು ಇಸ್ತಾನ್‍ಬುಲ್, ಬರ್ಸ ಮತ್ತು ಇeóïಮೀರ್ ನಗರಗಳಲ್ಲಿವೆ. ಜಾಂಗಲ್‍ದಾರ್ ಹಾಗೂ ಕಾರಬೂಕ್ ನಗರಗಳಲ್ಲಿ ರಸಾಯನ ಮತ್ತು ಕೈಗಾರಿಕೆಗಳಿವೆ. ಸಿಗರೇಟ್, ಚುಟ್ಟ, ಗಾಜಿನ ವಸ್ತು, ಕಾಗದ, ಹಣ್ಣುಗಳ ಡಬ್ಬೀಕರಣ ಈ ಕೈಗಾರಿಕೆಗಳು ತುರ್ಕಿಯಲ್ಲಿ ಬೆಳೆದಿವೆ.

ವಾಣಿಜ್ಯ : ಹೊಗೆಸೊಪ್ಪು, ಹಣ್ಣು, ಹತ್ತಿ, ಕ್ರೋಮ್, ತಾಮ್ರ, ಆಫೀಮು - ಇವು ತುರ್ಕಿಯ ಮುಖ್ಯ ನಿರ್ಯಾತಗಳು. ಯಂತ್ರೋಪಕರಣ, ಮೋಟಾರ್ ವಾಹನ, ಪೆಟ್ರೋಲ್, ಹತ್ತಿ ಬಟ್ಟೆ - ಇವು ಅದರ ಮುಖ್ಯ ಆಯಾತಗಳು.

ಸಾರಿಗೆ ಸಂಪರ್ಕ : ತುರ್ಕಿಯ ರೈಲ್ವೆಗಳನ್ನು 1924 ರಲ್ಲಿ ರಾಷ್ಟ್ರೀಕರಿಸಲಾಯಿತು. ಅಲ್ಲಿರುವ ರೈಲು ಮಾರ್ಗಗಳ ಉದ್ದ 7,973 ಕಿಮೀ. (1967). ಹೊಸ ರೈಲು ಮಾರ್ಗಗಳು ಎರೈಲೀ, ಜೊಂಗಾಲ್‍ದಕ್ ನಗರಗಳಿಂದ ಆಂಕರ, ಕೈಸರೀ ಹಾಗೂ ಆಡನ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಜನಸಾಂದ್ರತೆ ಹೆಚ್ಚಾಗಿರುವ ಕಪ್ಪುಸಮುದ್ರ ತೀರದಲ್ಲಿ ಹಲವಾರು ರೈಲು ಮಾರ್ಗಗಳಿವೆ. ಆನಟೋಲಿಯನ್ ಪ್ರಸ್ಥಭೂಮಿಯ ಸುತ್ತ ಉಂಗುರದಂತೆ ಹಬ್ಬಿರುವ ರೈಲು ಮಾರ್ಗಗಳಿಂದ ಹೊರವಲಯಗಳಿಗೆ ಶಾಖೆಗಳಿವೆ.

1971ರಲ್ಲಿದ್ದ ಸರ್ವಋತು ರಸ್ತೆಗಳ ಉದ್ದ 37,000 ಮೈ. ಅದರಲ್ಲಿ 13,000 ಮೈ. ಕಾನ್‍ಕ್ರೀಟ್. ಉಳಿದವು ಜಲ್ಲಿ ಅಥವಾ ಮ್ಯಕಡಮ್ ರಸ್ತೆಗಳು. ಮುಖ್ಯವಾದ ಹೆದ್ದಾರಿಗಳಿಗೆ ಮಧ್ಯ ಆನಟೋಲಿಯದ ಆಂಕರ, ಪಶ್ಚಿಮದ ಇಸ್ತಾನ್ ಬುಲ್ ಮತ್ತು ಇeóïಮಿರ್ ಮತ್ತು ಪೂರ್ವದ ಎಜರ್ûರೂಮ್ ಹಾಗೂ ದಿಯಾರ್ ಬಕೀರ್‍ಗಳು ಕೇಂದ್ರಗಳು.

ತುರ್ಕಿಯ ಕರಾವಳಿಯ ಉದ್ದ 3,000 ಮೈ. (4,800 ಕಿಮೀ.) ಹಡಗು ವ್ಯವಸ್ಥೆ ಅಷ್ಟೇನೂ ಬೆಳೆದಿಲ್ಲ. 1971ರಲ್ಲಿದ್ದ ದೇಶದ ವ್ಯಾಪಾರ ನೌಕೆಯ ಸ್ಥೂಲ ತೂಕ 7,14,000 ಟನ್. ಇದರಲ್ಲಿ 80% ತೈಲ ಟ್ಯಾಂಕರುಗಳು ಅಥವಾ ಸರಕು ಸಾಗಣೆ ಹಡಗುಗಳು. ದೇಶದ ಆಯಾತದ 50% ಕ್ಕಿಂತ ಹೆಚ್ಚು ಭಾಗ ಮತ್ತು ನಿರ್ಯಾತದ 11% ರಷ್ಟು ಭಾಗ ಇಸ್ತಾನ್‍ಬುಲ್ ಮೂಲಕ ಸಾಗುತ್ತದೆ. ಇeóïಮಿರ್‍ಗೆ ಎರಡನೆಯ ಸ್ಥಾನ (ನಿರ್ಯಾತದ 35%). ಇತರ ಮುಖ್ಯ ರೇವುಗಳು ಮೆರ್ಸಿನ್, ಇಸ್ಕೆಂದರೂನ್, ಸಾಮ್ಸುನ್, ಟ್ರ್ಯಾಬ್eóÁನ್, ಮತ್ತು eóÁಂಗಾಲ್‍ದಾಕ್ ಒಳನಾಡಿನ ಜಲಯಾನ ಹೆಚ್ಚಿಲ್ಲ. ವ್ಯಾನ್ ಸರೋವರದ ಮೇಲೆ ಮಾತ್ರ ನೌಕಾ ಸಂಚಾರ ಉಂಟು.

ತುರ್ಕಿಯಲ್ಲಿ ಪರ್ವತಗಳು ಹೆಚ್ಚಾಗಿದ್ದರಿಂದ ವಿಮಾನ ಸಂಚಾರಕಕ್ಕೆ ಪಾಶಸ್ತ್ಯವಿದೆ. 1960ರಲ್ಲಿ 22 ಒಳನಾಡ ವಿಮಾನ ನಿಲ್ದಾಣಗಳಿದ್ದವು. ತುರ್ಕಿ ವಿಮಾನ ಸಂಸ್ಥೆ ಸರ್ಕಾರಿ ಒಡೆತನದಲ್ಲಿದೆ. ಆಂಕರದಿಂದ ಇಸ್ತಾನ್‍ಬುಲ್, ಇeóïಮೀರ್, ಆಡನ, ಎಜರ್ûುರೂಮ್, ವ್ಯಾನ್, ಸಾಮ್ಸುನ್, ಟರ್ಯಾಬ್eóÁನ್‍ಗಳಿಗೆ ವಿಮಾನಗಳು ಹಾರುತ್ತವೆ. ದೇಶೀಯ ವಿಮಾನ ಮಾರ್ಗಗಳಿಗೆ ಆಂಕರ ಪ್ರಧಾನ ಕೇಂದ್ರವಾದರೆ, ಅಂತರಾಷ್ಟ್ರೀಯ ವಿಮಾನ ಸಾರಿಗೆ ಪ್ರಮುಖ ಕೇಂದ್ರ ಇಸ್ತಾನ್ ಬುಲ್, ಇeóïಮಿರ್ ಮೂರನೆಯ ಮುಖ್ಯ ವಿಮಾನ ಕೇಂದ್ರ.

ತುರ್ಕಿಯ ನಾಣ್ಯ ತುರ್ಕಿ ಲೀರಾ (ಖಿ.ಐ.) ಅಥವಾ ಪೌಂಡ್. ಇದನ್ನು 100 ಕುರುಸ್‍ಗಳಾಗಿ ವಿಂಗಡಿಸಲಾಗಿದೆ. ದೇಶದಲ್ಲಿ ಮೆಟ್ರಿಕ್ ತೂಕ ಮತ್ತು ಅಳತೆ ಪದ್ಧತಿ ಜಾರಿಯಲ್ಲಿದೆ. 						 (ವಿ.ಜಿ.ಕೆ.)

ಇತಿಹಾಸ : ತುರ್ಕಿಯ ರಾಜಕೀಯ ಇತಿಹಾಸವನ್ನು ಸ್ಥೂಲವಾಗಿ 11ನೆಯ ಶತಮಾನದ ಆದಿಯಿಂದ ಇಲ್ಲಿ ಗುರುತಿಸಲಾಗಿದೆ. 1923 ರಲ್ಲಿ ಇದು ಒಂದು ಗಣರಾಜ್ಯವಾಯಿತು. ತುರ್ಕಿ ಒಂದು ರಾಷ್ಟ್ರದ ಸ್ವರೂಪ ಹೊಂದಲು ಸುಮಾರು ಎಂಟುನೂರು ವರ್ಷಗಳು ಹಿಡಿದಿವೆ. ಆನಟೋಲಿಯಕ್ಕೆ ಸೆಲ್ಯುಕ್ ತುರ್ಕರು ವಲಸೆ ಬಂದುದಿನಿಂದ ಇವರ ಇತಿಹಾಸ ಪ್ರಾರಂಭವಾಗುತ್ತದೆ. ಸೆಲ್ಜುಕರು 1176 ರಲ್ಲಿ ಬಿeóÁಂಟಿಯನ್ ಅರಸರನ್ನು ಸಂಪೂರ್ಣವಾಗಿ ಸೋಲಿಸಿ, ಮೊದಲ ಬಾರಿಗೆ ಸಂಘಟನೆಯನ್ನು ಸಾಧಿಸಿದರು. ಆನಟೋಲಿಯದಲ್ಲಿ ಮೊದಲು ಸ್ಥಾಪನೆಗೊಂಡರು. ಅವರು ಆಡಲಿನ್ ಮತ್ತು ನಿನೋಪಿಯನ್ನು ಹಿಡಿದುದಲ್ಲದೇ ಫಿನೀಷಿಯ ಮತ್ತು ಜಿನೋವದೊಡನೆ ವ್ಯಾಪಾರ ನಡೆಸಿದರು. 1ನೆಯ ಕೈಕೊಬಾದನ ಕಾಲದಲ್ಲಿ (1219-37) ಅವರ ಪ್ರತಿಷ್ಠೆ ಬೆಳೆಯಿತು. ಆನಟೋಲಿಯದಲ್ಲಿ ಸೆಲ್ಜುಕರ ಪ್ರಭಾವ ಅದರ ಕೊನೆಯ ಅರಸ 2ನೆಯ ಮಾಸೂದನ (1308) ಅನಂತರ ಕಡಿಮೆಯಾಯಿತು. ಆದರೆ ಈ ಅವಧಿಯಲ್ಲಿ ವಾಸ್ತುಶಿಲ್ಪ ಕಲೆ ಮತ್ತು ಸಾಹಿತ್ಯ ಬೆಳೆಯಿತಲ್ಲದೆ ಇಸ್ಲಾಂ ಧರ್ಮಕ್ಕೆ ಜನರು ಅದರ ತೋರಿಸ ಹತ್ತಿದರು. ಕ್ರಮೇಣ ಸೆಲ್ಜುಕರು ಅವನತಿ ಹೊಂದಲು ಉeóïಬೇಗರೆಂಬ ಸ್ವತಂತ್ರ ಅರಸರು ಅಳಲು ಪ್ರಾರಂಭಿಸಿದರು.

ಇವರ ಪೈಕಿ ಒಬ್ಬ ಅರಸ ಊಸ್ಮಾನ್. ಇವನು ಆಟೊಮನ್ ಸುಲ್ತಾನ್ ಮನೆತನದ ಮೂಲಪುರುಷ. ಇವನ ಮಗ ಆರ್‍ಖಾನನ ಕಾಲದಲ್ಲಿ (1279-1359) ಈ ಮನೆತನದ ರಾಜ್ಯ ಬೆಳೆಯಿತು. ಐರೋಪ್ಯ ದೇಶಗಳಿಗೆ ಇದು ವಿಸ್ತರಿಸಿತು. 1345ರ ವೇಳೆಗೆ ಡಾರ್ಡೆನಲ್ಸ್‍ನಿಂದ ಆಚೆಯ ಗ್ಯಾಲಿಪೊಲಿಯ ನೆರೆಹೊರೆಯ ಪ್ರದೇಶವನ್ನೂ ವಶಪಡಿಸಲಾಯಿತು. ಪೂರ್ವದಲ್ಲಿ ಇದು ಆಂಕರದ ವರೆಗೂ ಹಬ್ಬಿತು. 1959ರಲ್ಲಿ ಆರ್‍ಖಾನ್ ತೀರಿಕೊಂಡ. ಅನಂತರ ಬಂದ ಒಂದನೆಯ ಮುರಾದ (1319-1389) ಬಾಲ್ಕನ್‍ನ ಬಹು ಭಾಗವನ್ನು ಗೆದ್ದು ತ್ರೇಸ್ ಮತ್ತು ಏಡ್ರಿಯಾನೊಪಲ್ ವಶಮಾಡಿಕೊಂಡ. ಕಾಸವೋ ಯುದ್ಧದಲ್ಲಿ ಸರ್ಬಾರನ್ನೂ ಆಲ್ಬೇನಿಯನರನ್ನೂ ಬಾಸ್ನಿಯನರನ್ನೂ ಸೋಲಿಸಿದನು. ಸರ್ಬಿಯನ್ ಚಕ್ರಾಧಿಪತ್ಯ ಚೂರುಚೂರಾಯಿತು. 1389ರ ಕದನದಲ್ಲಿ ಮುರಾದ ಕೊಲೆಯಾದ. ಅನಂತರ ಬಂದ ದೊರೆ ಬೇಯಾಜಿûೀದ್ ಆಟೊಮನ್ ತುರ್ಕರ ರಾಜ್ಯವನ್ನು ಆನಟೋಲಿಯದ ಆಗ್ನೇಯ ದಿಕ್ಕಿನಲ್ಲಿ ವಿಸ್ತರಿಸಿದ. ಯೂರೋಪಿನಲ್ಲಿ ತೆಸಲಿ ಮತ್ತು ಉತ್ತರ ಗ್ರೀಸನ್ನು ವಶಪಡಿಸಿಕೊಂಡ. ಅನಂತರ ರಾಜ್ಯ ಒಡೆಯಿತು. ಬೇಯಾಜಿûದನ ಮಕ್ಕಳಲ್ಲೊಬ್ಬನಾದ 1ನೆಯ ಮಹಮ್ಮದ್ ರಾಜ್ಯವನ್ನು ಒಂದುಗೂಡಿಸಿ ಧಾರ್ಮಿಕ ದಂಗೆಯನ್ನು ಅಡಗಿಸಿದ. ಇವನ ಆಡಳಿತಕಾಲದಲ್ಲಿ ವಾಸ್ತವವಾಗಿ ತುರ್ಕಿ ರಾಜ್ಯ ಡಾನ್ಯೂಬ್‍ವರೆಗೂ ವಿಸ್ತರಿಸಿತ್ತು. 2ನೆಯ ಮುರಾದ್ (1403-51) ಸ್ಯಾಲೊನಿಕವನ್ನು ವೆನಿಸಿನಿಂದ ಕಿತ್ತುಕೊಂಡನಲ್ಲದೇ ಹಂಗರಿಯನರನ್ನು 2ನೆಯ ಕಾಸವೋ ಯುದ್ಧದಲ್ಲಿ ಸೋಲಿಸಿದ. ಆನಟೋಲಿಯ ಮತ್ತು ಬಾಲ್ಕನ್‍ಗಳನ್ನೊಳಗೊಂಡ ಪ್ರದೇಶಕ್ಕೆ 2ನೆಯ ಮಹಮ್ಮದ್ ಅರಸನಾಗಿ 1453ರಲ್ಲಿ ಕಾನ್‍ಸ್ಟಾಂಟಿನೋಪಲ್ ಹಿಡಿದು ಫತ್ತೆ ಎಂಬ ಬಿರುದನ್ನು ಗಳಿಸಿದ. ಈ ವಿಜಯ ಮುಂದಿನ 41/2 ಶತಮಾನಗಳ ಕಾಲದ ತುರ್ಕಿಯ ಇತಿಹಾಸ ಉಜ್ವಲವಾಗುವಂತೆ ಮಾಡಿತು. ಕಾನ್‍ಸ್ಟಾಂಟಿನೋಪಲ್ ತುರ್ಕಿಯ ರಾಜಧಾನಿಯಾಯಿತು. ಆದರೆ ಅದರಿಂದ ತುರ್ಕಿ ತನ್ನ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಲಿಲ್ಲ. ತುರ್ಕಿ ಚಕ್ರಾಧಿಪತ್ಯದ ಐರೋಪ್ಯ ಭಾಗಗಳನ್ನು ಕೂಡ ಸರಿಯಾಗಿ ನಿಯಂತ್ರಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ರಷ್ಯನ್ನರ ಒತ್ತಡ ತುರ್ಕಿಯ ಅವನತಿಗೆ ಅನುವು ಮಾಡಿಕೊಟ್ಟಿತು. ಮಹಮ್ಮದ್ ಸರ್ಬಿಯ, ಬಾಸ್ನಿಯ, ಹeóರ್ïಗೋವಿನ ಮತ್ತು ಅಲ್ಬೇನಿಯಗಳನ್ನು ಗೆದ್ದ. 1474 ರಲ್ಲಿ ಕ್ರಿಮಿಯದ ತಾತಾರರು ತುರ್ಕರಿಗೆ ಅಧೀನರೆಂದು ಒಪ್ಪಿಕೊಂಡರು. ಮಹಮ್ಮದ್ ಇನ್ನೂ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡ. 2ನೆಯ ಬೇಯಾಜಿûೀದ್ (ಆಳ್ವಿಕೆ 1485-1513) ಯುದ್ಧಮಾಡಿ ಒಡೆಸ್ಸದ ನೆರೆಯ ಭಾಗಗಳನ್ನು ವಶಮಾಡಿಕೊಂಡ. 1ನೆಯ ಸೆಲೀಮನ ಆಳ್ವಿಕೆಯ (1512-20) ಕಾಲದಲ್ಲಿ ತುರ್ಕಿ ಪ್ರಭುತ್ವ ಪರ್ಷಿಯನ್ನರ ಮೇಲೆ ವಿಜಯ ಸಂಪಾದಿಸಿತು. ಇದರಿಂದ ತುರ್ಕಿಗೆ ನೈಸರ್ಗಿಕ ಗಡಿ ದೊರಕುವಂತಾಯಿತು. ಇವನು ಮಾಮೆಲೂಕರನ್ನು ಸೋಲಿಸಿ ಈಜಿಪ್ಟನ್ನು ವಶಪಡಿಸಿಕೊಂಡ. 1ನೆಯ ಸುಲೇಮಾನ್ ಚಕ್ರವರ್ತಿಯ ಆಳ್ವಿಕೆ (1520-66) ಆಟೊಮನ್ ಇತಿಹಾಸದಲ್ಲಿ ವಿಶೇಷ ಕೀರ್ತಿ ಪಡೆಯಿತು. ಏಷ್ಯದಲ್ಲಿ ಸೆಲ್ಜುಕ್ ವಿಸ್ತರಿಸಿತು. ಆನಟೋಲಿಯದ ಷಿಯಾ ದಂಗೆಯನ್ನು ಇವನು ಸದೆಬಡಿದ. 1534ರಲ್ಲಿ ಇರಾಕ್ ಮೇಲೆ ಆಕ್ರಮಣ ನಡೆಸಿ ಬಾಗ್‍ದಾದನ್ನು ವಶಪಡಿಸಿಕೊಂಡ. 1538ರಲ್ಲಿ ಎಮನ್ ವಶವಾಯಿತು. ಪರ್ಷಿಯ ಕೊಲ್ಲಿಯ ವರೆಗೂ ಇವನ ಸಾಮ್ರಾಜ್ಯ ವಿಸ್ತರಿಸಿತು. ಯೂರೋಪಿನಲ್ಲಿ ಬೆಲ್ಗ್ರೇಡನ್ನು ವಶಮಾಡಿಕೊಂಡು 1525 ರಲ್ಲಿ ಹಂಗರಿಯ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಲೂಯಿಸ್ ದೊರೆಯನ್ನು ಕೊಂದು ಬೂಡವನ್ನು ಆಕ್ರಮಿಸಿದ. 1528 ರಲ್ಲಿ ಮತ್ತೆ ಅಲ್ಲಿಯ ಸ್ಥಳೀಯ ದಂಗೆಯೊಂದನ್ನು ಅಡಗಿಸಿ ಅದನ್ನು ಪುನ: ಆಕ್ರಮಿಸಿಕೊಂಡು ಆಸ್ಟ್ರಿಯದಲ್ಲಿ ಮುನ್ನುಗ್ಗಿ 24 ದಿನಗಳ ಕಾಲ ಕದನವನ್ನು ಮುಂದುವರಿಸಿದ. 1541 ರಲ್ಲಿ ಮತ್ತೆ ಬೂಡದ ಮೇಲೆ ದಂಡೆತ್ತಿ ಹೋಗಬೇಕಾಯಿತು. ಇದೇ ಸಂಬಂಧದಲ್ಲಿ ಕ್ರೋಷಿಯವನ್ನು ಸ್ವಾಧೀನಪಡಿಸಿಕೊಂಡ. ಮೆಡಿಟರೇನಿಯನ್ ಪ್ರದೇಶದಲ್ಲಿ ರೋಡ್ಸ್ ಮತ್ತು ಟ್ರಿಪೋಲಿ ಇವನ ವಶವಾದುವು. ವೆನಿಸ್ ಮತ್ತು ಹೋಲಿ ಲೀಗ್‍ನೊಡನೆ ನಡೆದ ಯುದ್ಧದಲ್ಲಿ ವೆನಿಸ್ಸಿನ ಕೆಲವು ದ್ವೀಪಗಳು ಇವನಿಗೆ ಸೇರಿದವು. 1535 ರಲ್ಲಿ ಫ್ರೆಂಚರು ತುರ್ಕಿಯೊಡನೆ ಒಪ್ಪಂದ ಮಾಡಿಕೊಂಡು ಕೆಲವು ಧಾರ್ಮಿಕ ಮತ್ತು ವ್ಯಾಪಾರ ಹಕ್ಕುಗಳನ್ನು ಪಡೆದರು. ಸುಲೇಮಾನನ ತರುವಾಯ ಆಳಿದವರು 2ನೆಯ ಸಲೀಮ್ (1566-74.) ಇವನು ವೆನಿಸ್‍ನ ಮೇಲೆ ಹೊಸ ಯುದ್ಧ ಆರಂಭಿಸಿದ. 1571 ರಲ್ಲಿ ಸೈಪ್ರಸ್ ವಶವಾಯಿತು. 3ನೆಯ ಮುರಾದನ ಆಳ್ವಿಕೆಯ ಕಾಲ 1574-95. ಇವನ ಆಳ್ವಿಕೆಯ ಅವಧಿಯಲ್ಲಿ ಫ್ರೆಂಚರಿಗೂ ತುರ್ಕರಿಗೂ ದೀರ್ಘಯುದ್ಧ ಆರಂಭವಾಯಿತು. ಈ ಯುದ್ಧ 1606 ರ ವರೆಗೆ ನಡೆಯಿತು. ತುರ್ಕರಿಗೆ ಪೆನ್ಸಿಲ್ವೇನಿಯ ಸೇರಿತು. ಏಷ್ಯದಲ್ಲಿ ತುರ್ಕರು ಅಜûರ್‍ಬೈಜಾನ್ ಮತ್ತು ಕ್ಬ್ರೀಜನ್ನು ದೊರಕಿಸಿಕೊಂಡರು. 3ನೆಯ ಮುರಾದನ ಅನಂತರ ಆಳಿದ ಸುಲ್ತಾನರು 3ನೆಯ ಮಹಮ್ಮದ್ (1593-1603) ಮತ್ತು 1ನೆಯ ಅಹ್ಮದ್ (1603-17).

1640 ರಲ್ಲಿ ತುರ್ಕಿ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಸಾಮ್ರಾಜ್ಯವಾಗಿತ್ತು. ಸುಮಾರು 300 ವರ್ಷಗಳ ಕಾಲ ಬೆಳೆದುಬಂದ ಸಾಮ್ರಾಜ್ಯ ಮುಂದೆ ಸುಮಾರು ಅಷ್ಟೇ ಅವಧಿಯಲ್ಲಿ ತನ್ನ ಅವನತಿಯನ್ನು ಕಂಡಿತು. 1645 ರಲ್ಲಿ ಕ್ರೀಟ್ ಮತ್ತು 1672 ರಲ್ಲಿ ಪೋಲೆಂಡ್‍ನ ಕೆಲವು ಭಾಗಗಳನ್ನು ತುರ್ಕರು ಪಡೆದರು. ಈ ಅವಧಿಯಲ್ಲಿ ತುರ್ಕಿ, ರಷ್ಯ, ಆಸ್ಟ್ರಿಯ ಮತ್ತು ವೆನಿಸ್‍ಗಳೊಡನೆ ಯುದ್ಧಮಾಡಿ ಸೋಲನ್ನನುಭವಿಸಿ 1696ರ ಒಪ್ಪಂದದ ಪ್ರಕಾರ ಆಸ್ಟ್ರಿಯಕ್ಕೆ ಹಂಗರಿ, ಕ್ರೋಷಿಯ, ಸ್ಲಾವೋನಿಯವನ್ನು ವೆನಿಸಿಗೆ ಮರೀಯ ಮತ್ತು ಡಾಲ್ಮೇಷಿಯವನ್ನೂ ರಷ್ಯಕ್ಕೆ ಅeóÁಫನ್ನೂ ಬಿಟ್ಟುಕೊಡಬೇಕಾಯಿತು. 18ನೆಯ ಶತಮಾನದ ಆದಿಭಾಗದಲ್ಲಿ ಐರೊಪ್ಯ ರಾಷ್ಟ್ರಗಳೊಡನೆ ಯುದ್ಧ ಆರಂಭವಾಗಿ ಇದು ವೆನಿಸಿನಿಂದ ಮರಿಯವನ್ನು ಪುನ: ಪಡೆಯಿತು. ಪೋಲಿಷ್ ಅರಸೊತ್ತಿಗೆಯ ಬಗ್ಗೆ 1736 ರಲ್ಲಿ ನಡೆದ ಯುದ್ಧದಲ್ಲಿ ತುರ್ಕಿಗೆ ಅನುಕೂಲವಾದ ಒಪ್ಪಂದವಾಗಿ ಆಸ್ಟ್ರಿಯ ಪುನ: ಬೆಲ್ಗ್ರೇಡ್ ಮತ್ತು ಸರ್ಬಿಯವನ್ನು ತುರ್ಕಿಗೆ ಬಿಟ್ಟುಕೊಡಬೇಕಾಯಿತು. ರಷ್ಯ ಕೆಲವು ನಿಬಂಧನೆಗಳಿಗೆ ಒಪ್ಪಿದರೂ ಕ್ಯಾದರೀನ್ ರಾಣಿ 1768 ರಲ್ಲಿ ಸುಲ್ತಾನದ ಮೇಲೆ ಯುದ್ಧ ಸಾರಿ ಮಾಲ್ಥೇವಿಯ ಮತ್ತು ವ್ಯಲೇಷಿಯವನ್ನು ಮುತ್ತಿದಳು. ರಷ್ಯದ ನೌಕೆ ಇಜೀಯನ್ ಸಮುದ್ರದಲ್ಲಿ ವಿಜಯ ಸಂಪಾದಿಸಿತು. ಸುಲ್ತಾನ ಕಪ್ಪುಸಮುದ್ರದ ತೀರಪ್ರದೇಶ ಮತ್ತು ಇತರ ನೆಲಗಳನ್ನು ರಷ್ಯಕ್ಕೆ ಬಿಟ್ಟುಕೊಟ್ಟಿದ್ದಲ್ಲದೇ ತನ್ನ ಪ್ರಜೆಗಳ ಪರಿಸ್ಥಿತಿಯನ್ನು ಸುಧಾರಿಸುವುದಾಗಿಯೂ ತುರ್ಕಿ ಚಕ್ರಾಧಿಪತ್ಯದಲ್ಲಿ ವಾಸಮಾಡುತ್ತಿದ್ದ ಕ್ರೈಸ್ತರಿಗೆ ರಕ್ಷಣೆ ನೀಡುವ ಹಕ್ಕನ್ನು ರಷ್ಯಕ್ಕೆ ಬಿಟ್ಟುಕೊಡುವುದಾಗಿಯೂ ಒಪ್ಪಂದ ಮಾಡಿಕೊಂಡ. 1774 ರಲ್ಲಿ ಮಾಡಿಕೊಂಡ ಈ ಒಪ್ಪಂದ ರಷ್ಯದ ಮುಂದಿನ ನೀತಿಗೆ ಅಡಿಗಲ್ಲನ್ನು ಹಾಕಿತು. 1783 ರಲ್ಲಿ ರಷ್ಯ ಕ್ರಿಮಿಯನ್ನು ವಶಪಡಿಸಿಕೊಂಡ. ಮತ್ತೆ ಅದು ಯುದ್ಧ ಹೂಡಿತು. ಆಸ್ಟ್ರಿಯ ಪ್ರವೇಶಿಸಿ ಬೆಲ್ಗ್ರೇಡನ್ನು ವಶಪಡಿಸಿಕೊಂಡು ಅದನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ತುರ್ಕಿಯಲ್ಲಿ ಆಡಳಿತ ವ್ಯವಸ್ಥೆ ಸೈನ್ಯ ಖಾತೆ ಮತ್ತು ಪ್ರಾಂತೀಯ ಪರಿಸ್ಥಿತಿ ಹದಗೆಡುತ್ತ ಬಂತು. ಬಾಲ್ಕನ್ ಮತ್ತು ಇತರ ಪ್ರಾಂತ್ಯಗಳಲ್ಲಿ ಕ್ರೈಸ್ತರ ಅಸಮಾಧಾನ ಹೆಚ್ಚಿತು. ಕೆಲವು ಅಧಿಕಾರಿಗಳು ದಂಗೆಯೆದ್ದು ಸ್ವತಂತ್ರರಾಗಲು ಹವಣಿಸಿದಳು. ನೆಪೋಲಿಯನ್ನನ ತರುವಾಯ ಐರೋಪ್ಯ ದೇಶಗಳಲ್ಲಿ 19ನೆಯ ಶತಮಾನದಲ್ಲಿ ಹುಟ್ಟಿಕೊಂಡ ರಾಷ್ಟ್ರಪ್ರಜ್ಞೆಯಿಂದಾಗಿ ಬಾಲ್ಕನ್‍ನಲ್ಲಿ ಕ್ರಾಂತಿ ಉಂಟಾಯಿತು. ಮೊದಲು ಸರ್ಬಿಯದಲ್ಲಿ ದಂಗೆ ಎದ್ದಿತು. ಅನಂತರ ಮರೀಯದ ಗ್ರೀಕರು ಸ್ವತಂತ್ರ ಸಂವಿಧಾನವನ್ನು ಸಾರಿದರು. ಅಲ್ಲಿಯ ದಂಗೆಯನ್ನು ಹತ್ತಿಕ್ಕಲು ಈಜಿಪ್ಟಿನ ಪಾಷಾ ಮಹಮ್ಮದ್ ಆಲಿಯ ಮಗ ಇಬ್ರಾಹಿಮನನ್ನು ಸುಲ್ತಾನ ಕರೆಸಿದ. ಅಲ್ಲಿ ಅನೇಕ ಸಾವುನೋವುಗಳಾದವು. ಇದರಿಂದ ರಷ್ಯ ಮತ್ತು ಇತರ ರಾಷ್ಟ್ರಗಳು ನವಾರಿನೊ ಯುದ್ಧದಲ್ಲಿ ತುರ್ಕಿಯ ನೌಕಾಪಡೆಯನ್ನು ಸಂಪೂರ್ಣವಾಗಿ ನಾಶಮಾಡಿದವು. 1830 ರಲ್ಲಿ ಗ್ರೀಸಿಗೆ ಸ್ವಾತಂತ್ರ್ಯ ದೊರಕಿತು. ಈಜಿಪ್ಟಿನ ಮಹಮ್ಮದ್ ಆಗಿ ತನ್ನ ಮಗನನ್ನು ಕಳುಹಿಸಿ ಸಿರಿಯವನ್ನು ವಹಿಸಿಕೊಂಡ. ಬ್ರಿಟಿಷರ ಒತ್ತಾಯದಿಂದ ಮಹಮ್ಮದ್ ಅಲಿಯ ಬೇಡಿಕೆಗಳಿಗೆ ಸುಲ್ತಾನ ಒಪ್ಪಲೇಬೇಕಾಯಿತು. ಇದೇ ಕಾಲದಲ್ಲಿ ರಷ್ಯದ ಸಹಾಯ ಅಪೇಕ್ಷಿಸಿ ಮಾಡಿಕೊಂಡ ಒಪ್ಪಂದದಿಂದಾಗಿ ತುರ್ಕಿಯ ಮೇಲೆ ರಷ್ಯದ ಪ್ರಭಾವ ಬೆಳೆಯತೊಡಗಿತು. ಮಹಮ್ಮದನ ಮೇಲೆ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಸುಲ್ತಾನ 1839 ರಲ್ಲಿ ಸಿರಿಯದ ಮೇಲೆ ದಂಡೆತ್ತಿ ಹೋದ. ಆದರೆ ಯುದ್ಧದಲ್ಲಿ ಸೋಲು ಉಂಟಾಯಿತು. ಬ್ರಿಟಿಷ್ ಪ್ರಧಾನಿ ಪಾರ್‍ಸ್ಟನ್‍ನ ನಾಯಕತ್ವದಲ್ಲಿ ಬೃಹದ್‍ರಾಷ್ಟ್ರಗಳು ಲಂಡನ್ನಿನಲ್ಲಿ ಸಭೆ ಸೇರಿ ಮಾಡಿಕೊಂಡ ನಿರ್ಣಯದ ಪ್ರಕಾರ ಮಹಮ್ಮದ್ ಅಲಿಯ ಮಗ ಇಬ್ರಾಹಿಮನನ್ನು ಸಿರಿಯದಿಂದ ಓಡಿಸಿ ಮಹಮ್ಮದ್ ಆಲಿಯನ್ನು ಈಜಿಪ್ಟಿನ ಪಾಷಾನನ್ನಾಗಿ ಮಾಡಲಾಯ್ತು. ಸುಲ್ತಾನನ ವಶಕ್ಕೆ ಸಿರಿಯ, ಕ್ರೀಟ್, ಅರೆಬಿಯಗಳನ್ನು ಒಪ್ಪಿಸಲಾಯಿತು. ಇದೇ ಕಾಲದಲ್ಲಿ ತುರ್ಕಿಯ ಸೈನಿಕ ಮತ್ತು ಆಡಳಿತ ವರ್ಗದಲ್ಲಿ ಕೆಲವು ಸುಧಾರಣೆಗಳಾದವು. ಆದರೆ ಇವು ಕೇವಲ ತೋರಿಕೆಯವಾಗಿದ್ದು, ತುರ್ಕಿಯ ನಿಜವಾದ ಪರಿಸ್ಥಿತಿಯನ್ನು ಮುಚ್ಚಿಟ್ಟು ಐರೋಪ್ಯ ರಾಷ್ಟ್ರಗಳ ಸಹಾನುಭೂತಿಯನ್ನು ಪಡೆಯುವುದಕ್ಕೆ ಮಾತ್ರ ಆಗಿದ್ದವು. ಆದರೂ ಸುಧಾರಕರು ಪ್ರಾಮಾಣಿಕರಾಗಿ ವರ್ತಿಸಿದರು. ಸೈನಿಕ ಸುಧಾರಣೆಗಳಿಂದಾಗಿ ರಾಜ್ಯವನ್ನು ಆಧುನಿಕ ರೀತಿಯಲ್ಲಿ ರಕ್ಷಿಸಲು ಅನುಕೂಲವಾಯಿತು. ರಾಷ್ಟ್ರಪ್ರೇಮಕ್ಕೆ ಪ್ರೋತ್ಸಾಹ ದೊರಕಿತು. ವಿದ್ಯಾಭ್ಯಾಸ ಶಿಕ್ಷಣ ಸುಧಾರಣೆಗಳು ಅನಂತರ ಅಲ್ಲಿ ನಡೆದ ಕ್ರಾಂತಿಗೆ ಅವಶ್ಯವಾಗಿ ಅಧಿಕಾರಿಗಳನ್ನು ಒದಗಿಸಿಕೊಟ್ಟುವು. ಈ ನಡುವೆ ಕ್ರಿಮಿಯ ಯುದ್ಧ ಆರಂಭವಾಯಿತು. ತುರ್ಕಿಯ ಭಾಗಗಳನ್ನು ಕಬಳಿಸುವದು ರಷ್ಯದ ಉದ್ದೇಶವಾಗಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ತುರ್ಕಿಯ ಪಕ್ಷ ವಹಿಸಿ 1854ರಲ್ಲಿ ರಷ್ಯದ ಮೇಲೆ ಯುದ್ಧ ಘೋಷಿಸಿ ಕ್ರಿಮಿಯದ ಸೆಬಾಸ್ಟಪೋಲ್ ಬಂದರನ್ನು 1855 ರಲ್ಲಿ ವಶಪಡಿಸಿಕೊಂಡವು. ಪ್ಯಾರಿಸ್ ಒಪ್ಪಂದವಾದಾಗ ಯುದ್ಧ ಕೊನೆಗೊಂಡಿತ್ತು. ಆದರೆ ಯಾವುದೇ ಬಗೆಯ ಪರಿಣಾಮಕಾರಿಯಾದ ಉದ್ದೇಶವನ್ನೂ ಸಾಧಿಸಿದಂತಾಗಲಿಲ್ಲ. ಕ್ರಿಮಿಯ ಯುದ್ಧದ ಅನಂತರ ಬಾಲ್ಕನ್ ಪ್ರದೇಶಗಳ ಸಮಸ್ಯೆ ಮತ್ತೆ ತೀವ್ರಗೊಂಡಿತು. ತುರ್ಕಿಗೆ ಸೇರಿದ ಪ್ರದೇಶಗಳಲ್ಲಿ ಸ್ವಾತಂತ್ರ್ಯದ ಜಾಗೃತಿ ಉಂಟಾಗಿತ್ತು. ಈಜಿಪ್ಟಿನಲ್ಲಿ ಬ್ರಿಟಿಷ್ ಪ್ರಭಾವ ಬೆಳೆದು ಅಲ್ಲಿಯ ಪರಿಸ್ಥಿತಿಯೇ ಬೇರೆಯಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ತುರ್ಕಿ ಕ್ರಮೇಣ ನಿಸ್ಸಹಾಯಕ ದೇಶವಾಗುತ್ತ ಬಂದು ಪುನರುದ್ಧಾರ ಅಸಾಧ್ಯವಾಯಿತು. 1878ರಲ್ಲಿ ಬರ್ಲಿನ್‍ನಲ್ಲಿ ನಡೆದ ಬೃಹದ್ ರಾಷ್ಟ್ರಗಳ ಸಮ್ಮೇಳನ ಸ್ವತಂತ್ರ ಬಲ್ಗೇರಿಯವನ್ನು ನಿರ್ಮಿಸಿದ್ದಲ್ಲದೇ ಬಾಸ್ನಿಯ-ಹಜರ್ûಗೋವಿನವನ್ನು ಆಸ್ಟ್ರೀಯ ಆಡಳಿತಕ್ಕೆ ಒಪ್ಪಿಸಿತು. ಸರ್ಬಿಯ, ಮಾಂಟೆನಿಗ್ರೊ ಮತ್ತು ರುಮೇನಿಯ ಸ್ವತಂತ್ರವಾದವು. ಬ್ರಿಟನ್ನು ಸೈಪ್ರಸನ್ನು, ರಷ್ಯ ತುರ್ಕಿಯ ಕೆಲವು ಭಾಗಗಳನ್ನು ವಶಪಡಿಸಿಕೊಂಡಿತು. ಬೃಹತ್ ಬಲ್ಗೇರಿಯವಾಯಿತು. ಹೀಗೆ ತುರ್ಕಿ ಹರಿದು ಹಂಚಿಹೋಯಿತು. 2ನೆಯ ಅಬ್ದುಲ್ ಹಮೀದ್ (1876-1909) ನಿರಂಕುಶ ಪ್ರಭುವಾಗಿ ಕೆಲವು ಪುರಾತನ ಪದ್ಧತಿಗಳನ್ನು ಜಾರಿಗೆ ತಂದ, ಅರೇಬಿಯ ಮತ್ತು ಸಿರಿಯಗಳಲ್ಲಿ ಆಡಳಿತವನ್ನು ವ್ಯವಸ್ಥೆಗೊಳಿಸಿ ವಸಾಹತುಗಳನ್ನು ಸ್ಥಾಪಿಸಿ ಹೆಜಾಜ್ ರೈಲುಮಾರ್ಗವನ್ನು ಮದೀನ ವರೆಗೆ ನಿರ್ಮಿಸಿದ. ಆದರೆ ಅವನ ಸುತ್ತಲೂ ಸ್ವಾರ್ಥಿಗಳು ಸೇರಿಕೊಂಡು ಧರ್ಮದ ಹೆಸರಿನಲ್ಲಿ ಅನೇಕ ಅತ್ಯಾಚಾರಗಳನ್ನು ನಡೆಸಿದರು. ಅದೇ ಕಾಲದಲ್ಲಿ ತುರ್ಕಿಯ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು, ತುರ್ಕಿಯ ಅವನತಿಗೆ ಕಾರಣವಾಯಿತು. 1899 ರಲ್ಲಿ ಆರ್ಮೇನಿಯದಲ್ಲಿ ನಡೆದ ರಕ್ತಪಾತ, ಆಲ್ಬೇನಿಯ ಮತ್ತು ಮ್ಯಾಸಿಡೋನಿಯದ ಸ್ವಾಮ್ಯದ ಬಗ್ಗೆ ಕಲಹಗಳು, ಕ್ರೀಟಿನ ಪ್ರಶ್ನೆ ಇವು ಯುವ ತುರ್ಕರ ಕ್ರಾಂತಿಗೆ ಕಾರಣವಾದವು. 1908 ರಲ್ಲಿ ಮೇಜರ್ ನಿಯಾಜಿûಯ ನಾಯಕತ್ವದಲ್ಲಿ ಆರಂಭವಾಗಿ ಸಾಲೋನಿಕದಲ್ಲಿ ಅನ್ವರ್ ಬೇಯ ನೇತೃತ್ವದಲ್ಲಿ ಮುನ್ನಡೆಯಿತು. ಸಿರಿಯ, ಮ್ಯಾಸಿಡೋನಿಯ, ಕಾನ್‍ಸ್ಟಾಂಟೊನೋಪಲ್, ಆನಟೋಲಿಯ ಮುಂತಾದ ಎಲ್ಲಡೆಗಳಿಗೂ ಈ ನೂತನ ಚಳುವಳಿಯ ಹವೆ ತಗುಲಿತು. ಹಮೀದ್ ರಾಜ್ಯವನ್ನು ರಷೀದ್ ಮಹಮ್ಮದನಿಗೆ ಬಿಟ್ಟುಕೊಡಬೇಕಾಯಿತು. ಈ ಕ್ರಾಂತಿಯನ್ನು ಐರೋಪ್ಯ ರಾಷ್ಟ್ರಗಳು ಸ್ವಾಗತಿಸಿದವು. ಕೆಲವು ಅನಿರೀಕ್ಷಿತ ಘಟನೆಗಳಿಂದ ಇದಕ್ಕೆ ಅಡ್ಡಿಯುಂಟಾಯಿತು. ಆಸ್ಟ್ರಿಯ 1908 ರಲ್ಲಿ ಬಾಸ್ನಿಯ-ಹಜರ್ûಗೋವಿನವನ್ನು ನುಂಗಿತು. ಬಲ್ಗೇರಿಯ ಸಂಪೂರ್ಣ ಸ್ವಾತಂತ್ರ್ಯವನ್ನು ಸಾರಿಕೊಂಡಿತು. ಟ್ರಿಫೋಲಿಯನ್ನು ತೆಗೆದುಕೊಳ್ಳುವ ಸಲುವಾಗಿ ಇಟಲಿ 1911 ರಲ್ಲಿ ತುರ್ಕಿಯ ಮೇಲೆ ಯುದ್ಧ ಘೋಷಿಸಿತು. ಬಾಲ್ಕನ್ ರಾಷ್ಟ್ರಗಳು ಕೂಡ ತುರ್ಕಿಯ ಉಳಿದ ಭಾಗಗಳ ಮೇಲೆ ಕಣ್ಣಿಟ್ಟವು. 1ನೆಯ ಬಾಲ್ಕನ್ ಯುದ್ಧದಲ್ಲಿ ಕ್ರೀಟ್ ಮತ್ತು ಇನ್ನು ಕೆಲವು ಪ್ರದೇಶಗಳನ್ನು ಪಡೆದುಕೊಂಡವು. 2ನೆಯ ಬಾಲ್ಕನ್ ಯುದ್ಧದಲ್ಲಿ ಗ್ರೀಸಿಗೆ ಸ್ಯಾಲೋನಿಕವನ್ನೂ ಗ್ರೀಸ್ ಮತ್ತು ಸರ್ಬಿಯಗಳಿಗೆ ಮ್ಯಾಸಿಡೋನಿಯದ ಹಲವು ಭಾಗಗಳನ್ನೂ ಬಿಟ್ಟುಕೊಡಬೇಕಾಯಿತು.

ಜರ್ಮನಿಯೊಡನೆ ಒಪ್ಪಂದ ಮಾಡಿಕೊಂಡು ತುರ್ಕಿ ಒಂದನೆಯ ಮಹಾಯುದ್ಧವನ್ನು ಪ್ರವೇಶಿಸಿತು. ಮುಂದಿನ ಐದು ವರ್ಷಗಳಲ್ಲಿ ತುರ್ಕಿ ಕಾಕಸಸ್, ಸೂಯೆeóï, ಡಾರ್ಡೆನಲ್ಸ್, ಮೆಸೊಪೊಟೇಮಿಯ ಮತ್ತು ಪಯಾಲಸ್ಟೀನ್ ರಂಗಗಳಲ್ಲಿ ಯುದ್ಧ ಮಾಡಬೇಕಾಯಿತು. 1914-15 ರಲ್ಲಿ ತುರ್ಕಿ ತಬ್ರೀಜûನ್ನು ವಶಮಾಡಿಕೊಂಡಿತು. ಆದರೆ ಇದೇ ಅವಧಿಯಲ್ಲಿ ಬ್ರಿಟಿಷರು ಡಾರ್ಡನಲ್ಸ್ ಮೇಲೇ ದಾಳಿ ಮಾಡಿ ರಷ್ಯದೊಡನೆ ಸಂಪರ್ಕ ಬೆಳೆಸಲು ಮಾಡಿದ ಪ್ರಯತ್ನ ನಿಷ್ಫಲವಾದರೂ ಸ್ವಲ್ಪ ಕಾಲ ಗ್ಯಾಲಿಪೋಲಿಯವನ್ನು ವಶಪಡಿಸಿಕೊಂಡರು. ಮುಸ್ತಫ ಕೆಮಾಲ್ ತೋರಿಸಿದ ಧೈರ್ಯವೂ ಆಕ್ರಮಣಕಾರರ ನಿರುತ್ಸಾಹವೂ ಶತ್ರುಗಳ ಮುನ್ನುಗ್ಗುವಿಕೆಯನ್ನು ತಡೆದು ತುರ್ಕಿಯನ್ನು ರಕ್ಷಿಸಿದವು. ಬಾಸ್ರಾ ಎಣ್ಣೆ ಬಾವಿಗಳನ್ನು ರಕ್ಷಿಸಲು ಕಳುಹಿಸಿದ್ದ ಭಾರತೀಯ ಸೇನೆ ತುರ್ಕಿಯ ಸೇನೆಯನ್ನು ಸೋಲಿಸಿ ಬಾಗ್‍ದಾದ್ ವರೆಗೂ ಮುನ್ನುಗ್ಗಿತು. ಅರಬ್ ರಾಷ್ಟ್ರಗಳಲ್ಲಿ ಲಾರನ್ಸ್‍ನ ನೇತೃತ್ವದಲ್ಲಿ ತುರ್ಕಿಯ ವಿರುದ್ಧ ಬ್ರಿಟಿಷರು ಗಲಭೆ ಎಬ್ಬಿಸಿದರು. ಇದೇ ಅವಧಿಯಲ್ಲಿ ಸೂಯೆeóïನಿಂದ ಮುನ್ನಡೆದ ಬ್ರಿಟಿಷರಿಗೆ ಹಲವು ಪ್ರದೇಶಗಳು ವಶವಾದವು. ಗಾeóÁದ ಮುಂದೆ 1917ರಲ್ಲಿ ಅವರು ಪರಜಯ ಹೊಂದಿದರು. ಆಲೆನ್‍ಬಿಯ ನಾಯಕತ್ವದಲ್ಲಿ ಜೆರುಸಲೆಮ್‍ನ್ನು ತೆಗೆದುಕೊಳ್ಳಲಾಯಿತು. 1918 ರಲ್ಲಿ ರಷ್ಯ ಯುದ್ಧದಿಂದ ಹಿನ್ನಡೆದಾಗ ತುರ್ಕಿ ಕೆಲವು ಪ್ರದೇಶಗಳನ್ನು ಮತ್ತೆ ಗೆದ್ದುಕೊಂಡಿತು. ತುರ್ಕಿ 1918ರ ಅಕ್ಟೋಬರ್ 31 ರಂದು ಯುದ್ಧ ವಿರಾಮವನ್ನು ಅಪೇಕ್ಷಿಸಿತು. 1920 ರ ಜೂನ್‍ನಲ್ಲಿ ಮಿತ್ರ ರಾಷ್ಟ್ರಗಳು ತುರ್ಕಿಯ ಹಿತಕ್ಕೆ ವಿರುದ್ಧವಾದ ಒಪ್ಪಂದವೊಂದನ್ನು ಅದರ ಮೇಲೆ ಹೇರಿದವು. ರಾಷ್ಟ್ರವಾದಿಗಳು ಅದನ್ನು ತೀವ್ರವಾಗಿ ಪ್ರತಿಭಟಿಸಿದರು. ಈ ಒಪ್ಪಂದದ ಪ್ರಕಾರ ಯುರೋಪಿನಲ್ಲಿ ತುರ್ಕಿಗೆ ಕೇವಲ ಕಾನ್‍ಸ್ಟಾಂಟಿನೋಪಲ್ ಮತ್ತು ಅಲ್ಪ ಸ್ವಲ್ಪ ಭಾಗಗಳನ್ನು ಬಿಟ್ಟುಕೊಡಲಾಯಿತು. ಡಾರ್ಡೆನಲ್ಸ್ ಜಲಸಂಧಿಯನ್ನು ಅಂತರರಾಷ್ಟ್ರೀಯ ಆಡಳಿತಕ್ಕೆ ಒಪ್ಪಿಸಲಾಯಿತು. ಅಕ್ಕಪಕ್ಕದ ಜಿಲ್ಲೆಗಳನ್ನು ನಿಶ್ಯಸ್ತ್ರೀಕರಿಸಿದಲ್ಲದೇ ಗ್ರೀಕರಿಗೆ 5 ವರ್ಷಗಳ ವರೆಗೆ ಸ್ಮರ್ನದ ಆಡಳಿತವನ್ನೂ ಇಟಲಿಗೆ ಡೊಡೆಕನೀಸ್ ಮತ್ತು ರೋಡ್ಸ್ ದ್ವೀಪಗಳನ್ನೂ ಕೊಟ್ಟದ್ದಲ್ಲದೆ ಸ್ವತಂತ್ರ ಆರ್ಮೇನಿಯವನ್ನು ಸ್ಥಾಪಿಸಿ ಅರಬ್ ಪ್ರಾಂತ್ಯಗಳನ್ನು ತುರ್ಕಿಯ ವಶದಿಂದ ಕಿತ್ತುಕೊಳ್ಳಲಾಯಿತು.

ಗ್ರೀಕರು ರಕ್ತಪಾತ ನಡೆಸಿ ಸ್ಮರ್ನವನ್ನು ಆಕ್ರಮಿಸಿಕೊಂಡು ತುರ್ಕಿಯ ಒಳಪ್ರದೇಶಕ್ಕೂ ಮುಂದುವರಿದು ಬ್ರೂಸಾ ಪ್ರಾಂತ್ಯವನ್ನು ವಶಪಡಿಸಿಕೊಂಡರು. ರಾಷ್ಟ್ರೀಯ ಸೇನೆ ಅವರನ್ನು ಎರಡು ಸಾರಿ ಹಿಂದಕ್ಕೆ ತಳ್ಳಿದರೂ ಅವರು ಅಂಕರವನ್ನು ಹಿಡಿಯಲು ಪ್ರಯತ್ನಪಟ್ಟರು. ಎರಡು ವಾರಗಳ ಅನಂತರ ಸಕಾರ್ಯ ನದಿಯ ಮೇಲಣ ಯುದ್ಧದಲ್ಲಿ ಮುಸ್ತಫ ಅವರನ್ನು ಸೋಲಿಸಿ ಸಂಪೂರ್ಣವಾಗಿ ಸದೆಬಡಿದು ಸಮುದ್ರದಾಚೆ ಅವರನ್ನು ದೂಡಿದ (1922). ತುರ್ಕಿ ಸೇನೆಗಳು ಡಾರ್ಡೆನಲ್ಸ್ ಜಲಸಂಧಿ ಮತ್ತು ಮಾರ್ಮರ ತೀರವನ್ನು ಕೂಡ ಪ್ರವೇಶಿಸಿ ಬ್ರಿಟಿಷರ ಸೇನೆಗೆ ಅಪಾಯ ತಂದೊಡ್ಡಿತು. ಪದಚ್ಯುತಿಗೊಳಿಸಲ್ಪಟ್ಟ ತುರ್ಕಿ ಸುಲ್ತಾನ ಬ್ರಿಟಿಷ್ ಯುದ್ಧ ನೌಕೆಯಲ್ಲಿ ಆಶ್ರಯ ಪಡೆದ. 1923ರ ಜುಲೈ 24ರಂದು ಸಹಿ ಹಾಕಿದ ಲೋಸನ್ ಕೌಲಿನ ಪ್ರಕಾರ ತುರ್ಕರು ಇಡೀ ಆನಟೋಲಿಯವನ್ನು ಪಡೆದರು. ಆದರೆ ಅರಬ್ ಪ್ರಾಂತ್ಯವನ್ನು ಕಳೆದುಕೊಂಡರು. ಪೂರ್ವತ್ರೇಸ್ ಮತ್ತು ಎಡ್ರಿಯನೋಪಲ್ ತುರ್ಕಿಗೆ ಉಳಿದವು. ಇಟಲಿ ಡೊಡೆಕನೀಸನ್ನೂ ಬ್ರಿಟನ್ ಸೈಪ್ರಸನ್ನೂ ಇಟ್ಟುಕೊಂಡವು. ಡಾರ್ಡೆನಲ್ಸ್ ಜಲಸಂಧಿ ಪ್ರದೇಶಕ್ಕೆ ಒಂದು ಆಯೋಗ ನೇಮಕವಾಯಿತು. ಮಿತ್ರರಾಷ್ಟ್ರ ಸೇನೆಗಳು ಕಾನ್‍ಸ್ಟಾಂಟಿನೋಪಲ್ ಬಿಟ್ಟು ಹೊರಟವು. ತುರ್ಕಿ ಸೇನೆಗಳು ಪ್ರವೇಶಿಸಿದುವು. ಒಂದು ವಾರದ ಅನಂತರ ಆಂಕರವನ್ನು ತುರ್ಕಿಯ ರಾಜಧಾನಿಯೆಂದು ಸಾರಲಾಯಿತು. ರಾಷ್ಟ್ರೀಯ ಸಭೆ ಸೇರಿ 1923ರ ಅಕ್ಟೋಬರ್ 23ರಂದು ತುರ್ಕಿಯನ್ನು ಗಣರಾಜ್ಯವೆಂದು ಘೋಷಿಸಿತು. ಮುಸ್ತಾಫಾ ಕೆಮಾಲ್ ಪಾಷಾನನ್ನು ಮೊದಲನೆಯ ಅಧ್ಯಕ್ಷನಾಗಿಯೂ ಇಸ್ಮೆತ್ ಪಾಷಾನನ್ನು ಪ್ರಧಾನಿಯಾಗಿಯೂ ಆರಿಸಲಾಯಿತು.

ಮುಸ್ತಾಫಾ ಕೆಮಾಲ್ ತನ್ನ ಅನುಯಾಯಿಗಳನ್ನು ಪ್ರಜಾಪಕ್ಷದ ಅಡಿಯಲ್ಲಿ ಸಂಘಟಿಸಿದ. ಕಲೀಫನ ಸ್ಥಾನವನ್ನು ರದ್ದುಗೊಳಿಸಿ ಆಟೊಮನ್ ವಂಶಸ್ಥರನ್ನು ದೇಶಭ್ರಷ್ಟಗೊಳಿಸಿದ. ನೂತನ ಸಂವಿಧಾನದಿಂದ ಪ್ರಜೆಗಳಿಗೆ ಪರಮಾಧಿಕಾರ ದೊರಕಿತು. ಮುಸ್ಥಾಫಾನ ಅಧಿಕಾರವನ್ನು ಎದುರಿಸಿ ಅಲ್ಲಲ್ಲಿ ಕೆಲವು ವಿರೋಧಿಗಳು ಎದ್ದರು. 1925 ರಲ್ಲಿ ದೊಡ್ಡ ದಂಗೆಯೇ ಸಂಭವಿಸಿತು. ಅದರ ಪರಿಣಾಮವಾಗಿ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಸದೆಬಡಿಯಲಾಯಿತು. ಮುಂದಿನ 10 ವರ್ಷಗಳಲ್ಲಿ ಅನೇಕ ಕ್ರಾಂತಿಕಾರಿ ಸುಧಾರಣೆಗಳಾದವು. ಪಾಶ್ಚಾತ್ಯ ಸಂಸ್ಕøತಿಯನ್ನು ಅನುಕರಿಸಲಾಯಿತು. ಧಾರ್ಮಿಕ ಸಂಸ್ಥೆಗಳು ರದ್ದಾದುವು. 1928 ರ ವೇಳೆಗೆ ತುರ್ಕಿ ಲೌಕಿಕ ರಾಷ್ಟ್ರವಾಯಿತು. ಧಾರ್ಮಿಕ ನ್ಯಾಯವನ್ನು ರದ್ದುಮಾಡಿ ನೂತನ ಸಂಹಿತೆಗಳನ್ನು ಜಾರಿಗೆ ತರಲಾಯಿತು. ಪ್ರತಿಯೊಬ್ಬರೂ ಫೆeóïಗೆ ಬದಲಾಗಿ ಹ್ಯಾಟನ್ನು ಉಪಯೋಗಿಸಬೇಕೆಂದು ವಿಧಿಸಲಾಯಿತು. ಯಾರೂ ಹಳೆಯ ತುರ್ಕಿ ಬಿರುದುಗಳನ್ನು ಧರಿಸಬಾರದು; ಪ್ರತಿಯೊಬ್ಬರೂ ಕುಟುಂಬನಾಮವನ್ನು ಕಡ್ಡಾಯವಾಗಿ ಬಳಸಬೇಕು - ಎಂದು ವಿಧಿಸಲಾಯಿತು. ಕೆಮಾಲ್ ತನ್ನ ಪಾಷಾ ಎಂಬ ನಾಮವನ್ನು ತೆಗೆದುಹಾಕಿ ಕೆಮಾಲ್ ಆಟಾಟುರ್ಕ್ ಆದ. ಅವನ ಪ್ರಧಾನಿ ಇಸ್ಮೆತ್ ಇನೋನು ಎನಿಸಿಕೊಂಡ. ಅರಬ್ಬಿ ಮತ್ತು ಪರ್ಷಿಯನ್ ಲಿಪಿಗೆ ಬದಲಾಗಿ ರೋಮನ್ ಲಿಪಿಯನ್ನು ಬಳಸಿ ತುರ್ಕಿ ಭಾಷೆಯನ್ನು ಸುಧಾರಿಸಲಾಯಿತು. ಮೇಲಾಗಿ ಸ್ತ್ರೀಯರ ಸ್ಥಾನಮಾನಗಳನ್ನು ಸುಧಾರಿಸಿ ಅವರಿಗೆ ಸಮಾಜದಲ್ಲಿ ಪುರುಷರೊಡನೆ ಸಮಾನತೆಯನ್ನು ದೊರಕಿಸಿಕೊಡಲಾಯಿತು. ಕೆಮಾಲ್ 1938 ರಲ್ಲಿ ತೀರಿಕೊಳ್ಳುವ ವರೆಗೂ ತುರ್ಕಿಯ ಅಧ್ಯಕ್ಷನಾಗಿದ್ದ; ಇಸ್ಮೆತ್ ಪ್ರಧಾನಿಯಾಗಿದ್ದ. ಈ ಅವಧಿಯಲ್ಲಿ ತುರ್ಕಿ ಒಂದೇ ಪಕ್ಷ ಆಡಳಿತದಲ್ಲಿದ್ದು ಪ್ರಜಾಸತ್ತೆಯ ಸ್ವರೂಪವನ್ನು ಮಾತ್ರ ಇಟ್ಟುಕೊಂಡಿದ್ದರೂ ಅದು ಮುಂದುವರಿದ ರಾಷ್ಟ್ರವಾಯಿತು. ಒಂದನೆಯ ಮಹಾಯದ್ಧಕ್ಕೆ ಮೊದಲು ತುರ್ಕಿಯ ವ್ಯಾಪಾರ ಸಂಸ್ಥೆಗಳು ವಿದೇಶೀಯರ ಕೈಯಲ್ಲೇ ಇದ್ದವು. ಕೆಮಾಲ್ ಅಲ್ಲಿಯ ಆರ್ಥಿಕ ನೀತಿಯನ್ನು ಗಣರಾಜ್ಯ ತತ್ತ್ವಕ್ಕೆ ಅನುಗುಣವಾಗಿ ರೂಪಿಸಿದ. ಹಣಕಾಸಿನ ವ್ಯವಹಾರ ಸಾರಿಗೆ, ಕೈಗಾರಿಕೆ ಮೊದಲಾದವು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟವು. ನಾಣ್ಯಚಲಾವಣೆಗಳನ್ನು ಸರ್ಕಾರಿ ಬ್ಯಾಂಕು ವಹಿಸಿಕೊಂಡಿತು. ಮೊದಲ ಬಾರಿಗೆ ಯೋಜನೆಗಳು ಜಾರಿಗೆ ಬಂದವು. ವಿದೇಶೀ ಸಾಲವನ್ನು ಕೆಲವು ನಿಬಂಧನೆಗಳಿಗನುಸಾರವಾಗಿ ತೆಗೆದುಕೊಳ್ಳಬಹುದಾಗಿತ್ತು.

ರಾಜಕೀಯ ರಂಗದಲ್ಲಿ ತುರ್ಕಿ ಸರ್ಕಾರ ಗ್ರೀಸ್ ಮೊದಲಾದ ದೇಶಗಳೊಡನೆ ಇದ್ದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಂಡಿತು. ಗ್ರೀಸ್ ಮತ್ತು ತುರ್ಕಿ ರಾಷ್ಟ್ರಗಳು ಸಭೆ ಸೇರಿ ಬಾಲ್ಕನ್ ಪ್ರದೇಶಗಳ ವಿಕಾಸಕ್ಕೆ ಕೂಡಿ ಸಹಕರಿಸಿದುದಲ್ಲದೆ 1931 ರಲ್ಲಿ ಪರಸ್ಪರ ಆಕ್ರಮಣ ವಿರೋಧ ಒಪ್ಪಂದ ಮಾಡಿಕೊಂಡವು. ರಷ್ಯದೊಡನೆಯೂ 1921ರಿಂದ ಅನೇಕ ಒಪ್ಪಂದಗಳಾದವು. 1932ರಲ್ಲಿ ತುರ್ಕಿ ರಾಷ್ಟ್ರಗಳ ಕೂಟವನ್ನು ಸೇರಿತು. ಇಟಲಿಯೊಡನೆಯೂ ಸಂಬಂಧ ಸುಧಾರಿಸಿತು. 1936ರಲ್ಲಿ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಡಾರ್ಡೆನಲ್ಸ್ ಜಲಸಂಧಿಯ ಅಧಿಕಾರ ತುರ್ಕಿಗೆ ಬಂತಲ್ಲದೇ ಇತರ ದೇಶಗಳ ಹಡಗುಗಳ ಸಂಚಾರದ ಬಗ್ಗೆ ಕೆಲವು ನಿಯಮಗಳನ್ನು ಸೂಚಿಸಲಾಯಿತು. ಈ ಒಪ್ಪಂದ 20 ವರ್ಷಗಳ ಕಾಲ ಜಾರಿಗೆಯಲ್ಲಿರಬೇಕೆಂದು ತೀಮಾನಿಸಲಾಯಿತು, 1936ರಲ್ಲಿ ಇರಾಕ್-ಪರ್ಷಿಯಗಳೊಡನೆಯೂ ಗಡಿ ನಿರ್ಧಾರದ ಬಗ್ಗೆ ತುರ್ಕಿ ಒಪ್ಪಂದ ಮಾಡಿಕೊಂಡಿತು. 

ಕೆಮಾಲನ ನೀತಿ ವಿಶಿಷ್ಟವಾಗಿದ್ದಾತ್ತು. ಅವನ ನಿರಂಕುಶಾಧಿಕಾರ ತಾತ್ಕಾಲಿಕವಾಗಿತ್ತು. ಜನರು ಪ್ರಜಾಸತ್ತೆಗೆ ಪಕ್ವವಾಗಿಲ್ಲದ್ದರಿಂದ ಇದು ಅನಿವಾರ್ಯವೆಂದು ಪರಿಗಣಿಸಲಾಗಿತ್ತು. ಅವನು ರಾಷ್ಟ್ರದ ಸ್ವಾತಂತ್ರ್ಯ ಮತ್ತು ಅಂತರ ರಾಷ್ಟ್ರೀಯ ಸಹಕಾರದಲ್ಲಿ ನಂಬಿಕೆ ಇಟ್ಟಿದ್ದ ಪಾಶ್ಚಾತ್ಯ ಸ್ವರೂಪದ ಪ್ರಜಾಸತ್ತೆ ಪರಿಪೂರ್ಣವಾದ್ದೆಂದು ಅಂಥ ಸರ್ಕಾರವನ್ನು ತುರ್ಕಿಯಲ್ಲಿ ಸ್ಥಾಪಿಸುವುದೇ ತನ್ನ ಇಚ್ಛೆಯೆಂದೂ ಹೇಳುತ್ತಿದ್ದ. ಶಾಂತಿಯನ್ನು ಕಾಯುವುದೇ ಅವನ ಮುಖ್ಯ ಧ್ಯೇಯ. ತುರ್ಕಿ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಚಿತ ಪರಿಸ್ಥಿತಿಯನ್ನು ಅನುಭವಿಸಿತು.

1938 ರಲ್ಲಿ ಕೆಮಾಲ್ ಕಾಲವಾದ. ಇಸ್ಮೆತ್ ಇನೋನು ಅಧ್ಯಕ್ಷನಾದ. ಅಂತರಾಷ್ಟ್ರೀಯ ಪರಿಸ್ಥಿತಿ ಹದಗೆಟ್ಟಿತು. ಜರ್ಮನಿಯೂ ಇಟಲಿಯೂ ಸರ್ವಾಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿದ್ದವು. ಬಾಲ್ಕನ್ ರಾಷ್ಟ್ರಗಳ ಪರಿಸ್ಥಿತಿ ವಿಷಮವಾಗಿತ್ತು. ಇಂಗ್ಲೆಂಡಿನ ರಾಜಕಾರಣಿಗಳು ತುರ್ಕಿಯ ಸ್ನೇಹವನ್ನು ಸಂಪಾದಿಸಿದರು. ಎರಡನೆಯ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳಿಗೆ ಅದು ಸಹಕಾರ ನೀಡಿತು. ಯುದ್ಧಾರಂಭವಾದ ಕೂಡಲೇ ತುರ್ಕಿ ಪ್ರವೇಶಮಾಡುವ ಕಾರಣವಿಲ್ಲದಿದ್ದರೂ ಕೂಡ ಅಂಥ ಘಟನೆಗಳು ಸಂಭವಿಸಿದವು. ಆದರೆ ಅದು ಯುದ್ಧವನ್ನು ತಪ್ಪಿಸಿಕೊಂಡವು. 1941 ರ ವೇಳೆಗೆ ರಷ್ಯ ಅಜರ್‍ಬೈಜಾನನ್ನು ವಶಪಡಿಸಿಕೊಂಡಿತು. ಜರ್ಮನಿಯೊಡನೆ ಮಾಡಿಕೊಂಡ ಆಕ್ರಮಣ ನಿರೋಧದ ಒಪ್ಪಂದದ ಪ್ರಕಾರ ಅದು ಜರ್ಮನಿಗೆ ಅನೇಕ ವಸ್ತುಗಳನ್ನು ಒದಗಿಸಬೇಕಾಗಿತ್ತು. ಯುದ್ಧಾನಂತರ ಕಾಲದಲ್ಲಿ ತುರ್ಕಿ ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆಯಿತಲ್ಲದೇ ನೆರೆಹೊರೆಯ ರಾಷ್ಟ್ರಗಳೊಡನೆ ಸ್ನೇಹ ಬೆಳಸಿಕೊಂಡಿತು. ಯುದ್ಧದ ಅವಧಿಯಲ್ಲೂ ತುರ್ಕಿ ಶಾಂತಿಯನ್ನು ಕಾಪಾಡಿಕೊಂಡಿತು. 1950 ರಲ್ಲಿ ತುರ್ಕಿಯ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷ ವಿಜಯ ಸಂಪಾದಿಸಿತು. ಆ ಪಕ್ಷದ ಅಭ್ಯರ್ಥಿ 1954 ರಲ್ಲಿ ಅಧ್ಯಕ್ಷನಾಗಿ ಆರಿಸಿಬಂದ. ನೂತನ ಸರ್ಕಾರ ಹಳ್ಳಿಗಳ ಸುಧಾರಣೆಗೆ ವಿಶೇಷ ಗಮನ ನೀಡಿತು. ತುರ್ಕಿ ಉತ್ತರ ಅಟ್ಲಾಂಟಿಕ್ ಕೌಲು ಕೂಟದ ಸದಸ್ಯತ್ವ ಪಡೆಯಿತು.									     (ಜಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ